ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು, ಮನೆಯಲ್ಲಿ ಶವ ಕಂಡ ಅಕ್ಕ-ಪಕ್ಕದವರಿಗೆ ಶಾಕ್!
ಕುಟುಂಬದ ಮುಖ್ಯಸ್ಥರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಭೋಪಾಲ್: ಮಧ್ಯಪ್ರದೇಶದಲ್ಲಿ ದೆಹಲಿಯ ಬುರಾಡಿ ಮಾದರಿಯ ಪ್ರಕರಣವು ಹೊರಹೊಮ್ಮಿದೆ. ಒಂದೇ ಕುಟುಂಬದ 4 ಜನರ ಮೃತ ದೇಹ ಭೋಪಾಲ್ ಸಮೀಪದ ಮಂಡಿಡೈಪ್ನಲ್ಲಿರುವ ರೆಸಿಡೆಂಟ್ ಕಾಲೋನಿಯಲ್ಲಿ ಕಂಡುಬಂದಿದೆ. ಕುಟುಂಬದ ಮುಖ್ಯಸ್ಥರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಪೊಲೀಸರ ಪ್ರಕಾರ, ಮೊದಲ ಹಂತದ ತನಿಖೆಯಿಂದ ಇದು ಸಾಮೂಹಿಕ ಆತ್ಮಹತ್ಯೆ ಎಂದು ಕಂಡುಬಂದಿದೆ.
ಎಸ್ಪಿ ಮೋನಿಕಾ ಶುಕ್ಲಾ ಅವರ ಪ್ರಕಾರ, ಆಸ್ಪತ್ರೆಗೆ ದಾಖಲಿಸಲಾಗಿರುವ ಕುಟುಂಬದ ಮುಖ್ಯಸ್ಥನ ದೇಹದಲ್ಲಿ ವಿಷ ಕಂಡುಬಂದಿಲ್ಲ. ಮಾಹಿತಿ ಪ್ರಕಾರ, ವಾರ್ಡ್ ನಂ. 23ರ ಹಿಮಾಂಶು ಕಾಲೋನಿಯಲ್ಲಿ ಮನೆ ನಂಬರ್ 55ರಲ್ಲಿ ವಾಸಿಸುವ 25 ವರ್ಷದ ಸಂನೂ ಎನ್ನುವವರು ತನ್ನ ಪತ್ನಿ ಪೂರ್ಣಿಮಾ, ಮಾವ ಹಾಗೂ 11 ವರ್ಷದ ಭಾಮೈದ ಮತ್ತು 12 ದಿನದ ತನ್ನ ಮಗಳ ಜೊತೆ ವಾಸಿಸುತ್ತಿದ್ದರು. ಮಂಗಳವಾರ (ಜನವರಿ 22 ರಂದು) ನೆರೆಯ ನಿತಿನ್ ಚೌಹಾಣ್ ಯಾವುದೋ ಕೆಲಸಕ್ಕಾಗಿ ಸಂನೂ ಅವರನ್ನೂ ಬಹಳ ಸಲ ಕೂಗಿದಾಗ ಮನೆಯಿಂದ ಯಾವುದೇ ಶಬ್ದ ಬರಲಿಲ್ಲ. ಅಷ್ಟರಲ್ಲಿ ಉಳಿದ ನೆರೆಹೊರೆಯವರೂ ಸೇರಿದರು ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರ ನೇತೃತ್ವದಲ್ಲಿ ಮನೆ ಬಾಗಿಲು ಒಡೆದು ಒಳ ಪ್ರವೇಶಿಸಲಾಯಿತು. ಮನೆಯನ್ನು ಪ್ರವೇಶಿಸಿದೊಡನೆ ಕಂಡ ದೃಶ್ಯ ಅಕ್ಕ ಪಕ್ಕದವರನ್ನು ದಿಗ್ಭ್ರಮೆಗೊಳಿಸಿತು. ಕುಟುಂಬದ ಎಲ್ಲಾ 5 ಜನರು ಸುಪ್ತಾವಸ್ಥೆಯ ಸ್ಥಿತಿಯಲ್ಲಿದ್ದರು.
ಮಾಹಿತಿ ಪ್ರಕಾರ, ಪೊಲೀಸರಿಗೆ ಸಂನೂ ಇನ್ನೂ ಉಸಿರಾಡುತ್ತಿದ್ದರು. ಸಂನೂ ಪತ್ನಿ ಪೂರ್ಣಿಮಾ, ಕೆಲದಿನಗಳ ಹಿಂದೆಯಷ್ಟೇ ಮಹಾರಾಷ್ಟ್ರದಿಂದ ಬಂದಿದ್ದ ಅವರ ಮಾವ, ಮತ್ತು 11 ವರ್ಷದ ಭಾಮೈದ ಮರಣಹೊಂದಿದ್ದರು. ಆದರೆ ಸ್ಥಳದಲ್ಲಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಪತ್ರ ಲಭಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬುದರ ಬಗ್ಗೆ ತನಿಖೆ ಮುಂದುವರೆಸಿದ್ದಾರೆ. ಸತ್ತವರ ಬಾಯಿಯಿಂದ ಹೊರಬರುತ್ತಿದ್ದ ಹೊಗೆಯಿಂದಾಗಿ ವಿಷ ಸೇವನೆ ಶಂಕೆಯನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಉಸಿರುಕಟ್ಟುವಿಕೆಯಿಂದ ಕೂಡ ಸಾವು ಸಂಭವಿಸಿರಬಹುದು. ಕಾರಣ ಸ್ಥಳದಲ್ಲಿ ಕಲ್ಲಿದ್ದಲು ಸೀಗೆಯನ್ನು ಸುಡಲಾಗಿದೆ. ಹೀಗಾಗಿ ಆಮ್ಲಜನಕದ ಕೊರತೆಯಿಂದಲೂ ಈ ಸಾವು ಸಂಭವಿಸಿರಬಹುದು ಎನ್ನಲಾಗಿದೆ.
ಸೋಮವಾರ(ಜನವರಿ 21) ರ ಸಂಜೆ 6 ಗಂಟೆಯಿಂದ ಸಂನೂ ಅನ್ನು ಯಾರೂ ನೋಡಿಲ್ಲ ಎಂದು ನೆರೆಯವರು ತಿಳಿಸಿದ್ದಾರೆ. ಛತ್ತೀಸ್ಗಢದ ದಾಂತೇವಾಡಾದ ನಿವಾಸಿಯಾಗಿರುವ ಸಂನೂ ಹತ್ತಿರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ನಿಗೂಢ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.