ವಾರಣಾಸಿ: ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ (ಬಿಎಚ್ಯು) ವಿದ್ಯಾರ್ಥಿಯನ್ನು ಕ್ಯಾಂಪಸ್ ಒಳಗೆ ಗುಂಡಿಕ್ಕಿ ಹತ್ಯೆ ಗೈದಿರುವ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಮೃತ ವಿದ್ಯಾರ್ಥಿಯನ್ನು ವಿಶ್ವವಿದ್ಯಾನಿಲಯದಲ್ಲಿ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಂಸಿಎ) ನಾಲ್ಕನೇ ಸೆಮಿಸ್ಟರ್ ನಲ್ಲಿ ಓದುತ್ತಿದ್ದ ಗೌರವ್ ಸಿಂಗ್ ಎಂದು ಗುರುತಿಸಲಾಗಿದೆ.


ಮಂಗಳವಾರ ಸಂಜೆ ಹಾಸ್ಟೆಲ್ ಹೊರಗೆ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತ ನಿಂತಿದ್ದ ವೇಳೆ ಮೋಟಾರ್ಸೈಕಲ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಗೌರವ್ ಮೇಲೆ ಗುಂಡು ಹಾರಿಸಿ ಪಲಾಯನ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.


ಕಿಡಿಗೇಡಿಗಳು ವಿದ್ಯಾರ್ಥಿ ಮೇಲೆ ಗುಂಡು ಹಾರಿಸಿದ ತಕ್ಷಣವೇ ಆತನನ್ನು BHU ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ತುರ್ತು ಸೇವಾ ಘಟಕಕ್ಕೆ ಕರೆತರಲಾಗಿದೆ. ಆದರೆ ಆತನ ಹೊಟ್ಟೆಯಲ್ಲಿ ಬುಲೆಟ್ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರಿಂದ ಆತ ಮೃತ ಪಟ್ಟಿದ್ದಾನೆ ಎಂದು ಹೇಳಲಾಗಿದೆ.


ಸಿಸಿಟಿವಿ ಪರಿಶೀಲಿಸಿದ ಬಳಿಕ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.


"ವೈಯಕ್ತಿಕ ವೈರತ್ವದ ಹಿನ್ನೆಲೆಯಲ್ಲಿ ಗೌರವ್ ಸಿಂಗ್ ಎಂಬ ವಿದ್ಯಾರ್ಥಿಯ ಮೇಲೆ ಹತ್ಯೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ನಾಲ್ಕು ಜನರನ್ನು ಬಂಧಿಸಿದ್ದೇವೆ" ಎಂದು ವಾರಣಾಸಿ ಕಂಟೋನ್ಮೆಂಟ್ ಸರ್ಕಲ್ ಅಧಿಕಾರಿ ಅನಿಲ್ ಕುಮಾರ್ ಸಿಂಗ್ ಸುದ್ದಿ ಸಂಸ್ಥೆ ANI ಗೆ ತಿಳಿಸಿದರು.



ಮೃತ ಗೌರವ್ ಸಿಂಗ್ ತಂದೆ ರಾಕೇಶ್ ಸಿಂಗ್ ಬಿಎಚ್ಯುನಲ್ಲಿ ಕೆಲಸಗಾರರಾಗಿದ್ದಾರೆ.