ಶ್ರೀನಗರ್: ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನೆ ತನ್ನ ಕಾರ್ಯಾಚರಣೆ ಆರಂಭಿಸಿದ್ದು, ಇದರಲ್ಲಿ ಇಬ್ಬರು ಉಗ್ರರನ್ನು ಮಟ್ಟಹಾಕಿದ್ದಾರೆ. ಉಳಿದ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಮಾಹಿತಿ ನೀಡಿರುವ ಜಮ್ಮು ಮತ್ತು ಕಾಶ್ಮೀರದ ಐಜಿ ವಿಜಯ್ ಕುಮಾರ್, ಶನಿವಾರ ಕಣಿವೆಯಲ್ಲಿ ದೊಡ್ಡ ಉಗ್ರರ ಗುಂಪೊಂದು ಅವಿತು ಕುಳಿತಿರುವ ಕುರಿತು ಗುಪ್ತಚರ ಇಲಾಖೆಯ ಮೂಲಗಳು ನೀಡಿದ್ದವು. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರ್ ನ ಹೊರವಲಯದಲ್ಲಿರುವ ರಣಬೀರ್ ಗಡ್ ನಲ್ಲಿ ಸೇನೆ ಸರ್ಚ್ ಆಪರೇಶನ್ ನಡೆಸಿದೆ. ಈ ಸಂದರ್ಭದಲ್ಲಿ ಉಗ್ರರು, ಸೇನಾಪಡೆಯ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಯೋಧರು ಕೂಡ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ತಿಳಿಸಿದ್ದಾರೆ.


ಮೂಲಗಳ ಪ್ರಕಾರ ಪ್ರದೇಶದಲ್ಲಿ 2-3 ಉಗ್ರರ ಒಂದು ತಂಡ ಅವಿತು ಕುಳಿತಿರುವ ಸೂಚನೆ ಲಭಿಸಿತ್ತು. ಈ ಸೂಚನೆಯ ಆಧಾರದ ಮೇಲೆ 29 ರಾಷ್ಟ್ರೀಯ ರೈಫಲ್ಸ್, ಜಮ್ಮು-ಕಾಶ್ಮೀರ ಪೊಲೀಸರ ಎಸ್ಓಜಿ ಹಾಗೂ ಸಿಆರ್ಪಿಎಫ್ ಜವಾನರು ಸ್ಥಳಕ್ಕೆ ತೆರಳಿ ಶೋಧ ಕಾರ್ಯಾಚರಣೆ ಆರಂಭಿಸಿ, ಪ್ರದೇಶವನ್ನು ಸುತ್ತುವರೆದಿದ್ದಾರೆ. ಕಾಶ್ಮೀರ್ ಝೋನ್ ಪೊಲೀಸರು ಟ್ವೀಟ್ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ.


ಯೋಧರು ಶಂಕಿತ ಪ್ರದೇಶವನ್ನು ಸುತ್ತುವರೆದ ಸಂದರ್ಭದಲ್ಲಿ, ಪ್ರದೇಶದಲ್ಲಿ ಅವಿತು ಕುಳಿತ ಉಗ್ರರು ಶೋಧ ಕಾರ್ಯಾಚರಣೆ ನಡೆಸುತ್ತಿರುವ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಯೋಧರೂ ಕೂಡ ಪ್ರತ್ಯುತ್ತರ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಸುಮಾರು 2 ರಿಂದ 3 ಉಗ್ರರು ಕಾರ್ಡನ್ ನಲ್ಲಿ ಅವಿತುಕುಳಿತಿದ್ದು, ಉಗ್ರರ ಮೇಲೆ ಕಾರ್ಯಾಚರಣೆ ಮುಂದುವರೆದಿದೆ. ಕಾಶ್ಮೀರದಲ್ಲಿ ಈ ವರ್ಷ ಒಟ್ಟು 142 ಉಗ್ರರನ್ನು ಮಟ್ಟಹಾಕಿದ್ದು ಇಲ್ಲಿ ಉಲ್ಲೇಖನೀಯ.