ಬಿಹಾರ: BJP-JDU-LJP ನಡುವೆ ಸೀಟು ಹಂಚಿಕೆ, ನಾಳೆ ಘೋಷಣೆ ಸಾಧ್ಯತೆ
ಶುಕ್ರವಾರ ಹಣಕಾಸು ಸಚಿವ ಅರುಣ್ ಜೇಟ್ಲಿ ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ ಅವರನ್ನು ಭೇಟಿ ಮಾಡಿದ್ದಾರೆ.
ಪಾಟ್ನಾ: ಬಿಹಾರದಲ್ಲಿ ಬಿಜೆಪಿ, ಜನತಾ ದಳದ ಯುನೈಟೆಡ್ (ಜೆಡಿಯು) ಮತ್ತು ಲೋಕ ಜನಶಕ್ತಿ ಪಕ್ಷ (ಎಲ್ಜೆಪಿ) ನಡುವಿನ ಸ್ಥಾನ ಹಂಚಿಕೆಗಾಗಿ ಮಾತುಕತೆ ನಡೆದಿದ್ದು, ನಾಳೆ ಘೋಷಿಸುವ ಸಾಧ್ಯತೆ ಇದೆ.
ಶುಕ್ರವಾರದಿಂದ ಮೂರು ಪಕ್ಷಗಳ ನಡುವೆ ಅನೇಕ ಸುತ್ತುಗಳ ಸಭೆಗಳು ನಡೆದಿವೆ. ಸುದ್ದಿ ಸಂಸ್ಥೆ ANI ಪ್ರಕಾರ, ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ ಪ್ರಸ್ತುತ ಮುಂಬೈನಲ್ಲಿದ್ದಾರೆ, ಆದ್ದರಿಂದ ಈ ಘೋಷಣೆಯನ್ನು ನಾಳೆ(ಭಾನುವಾರ) ತನಕ ಮುಂದೂಡಲಾಗಿದೆ.
ಶುಕ್ರವಾರದಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ ಜೊತೆಗೆ ಎರಡೆರಡು ಬಾರಿ ಸಭೆ ನಡೆಸಿದ್ದರು. ಸೀಟು ಹಂಚಿಕೆ ಕುರಿತು ಮೂರು ಪಕ್ಷಗಳಲ್ಲಿ ಸಮಾಲೋಚನೆ ನಡೆಸಿದ ಬಳಿಕ ಮೂರು ಪಕ್ಷದ ನಾಯಕರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಚುನಾವಣೆಗಳಲ್ಲಿ ಸಮಾನ ಸಂಖ್ಯೆಯ ಸ್ಥಾನಗಳಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಎಲ್.ಜೆ.ಪಿ ಗೆ 6 ಲೋಕಸಭಾ ಸ್ಥಾನಗಳು ಮತ್ತು ಒಂದು ರಾಜ್ಯಸಭೆ ಸ್ಥಾನ ದೊರೆತಿದೆ ಎಂದು ಊಹಿಸಲಾಗಿದೆ.