ನವದೆಹಲಿ: ಆರೋಗ್ಯಕರ ಆಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊಸ ನಿಯಮ ರೂಪಿಸಿದ್ದು, ತನ್ನ ಎಲ್ಲಾ ಇಲಾಖೆಗಳ ಅಧಿಕೃತ ಸಭೆಗಳಲ್ಲಿ ಬಿಸ್ಕೆಟ್ ಗಳು, ಕುಕ್ಕೀಸ್, ಫಾಸ್ಟ್ ಫುಡ್ ವಿತರಣೆ ಮಾಡದಂತೆ ಸುತ್ತೋಲೆ ಹೊರಡಿಸಿದೆ.


COMMERCIAL BREAK
SCROLL TO CONTINUE READING

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ಸಚಿವಾಲಯದ ಕಟ್ಟಡದ ಒಳಗೆ ಮತ್ತು ಕ್ಯಾಂಟೀನ್‌ಗಳಲ್ಲಿ ಬಿಸ್ಕತ್ತುಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ, ಇಲಾಖಾ ಸಭೆಗಳಲ್ಲಿ ತ್ವರಿತ ಆಹಾರ, ಕುಕೀಸ್, ಬಿಸ್ಕತ್ತು ಮತ್ತು ಅನಾರೋಗ್ಯಕರ ಆಹಾರ ವಿತರಣೆಯನ್ನು ಕೂಡಲೇ ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 



ಅಷ್ಟೇ ಅಲ್ಲದೆ, ಇದಕ್ಕೆ ಬದಲಾಗಿ ಆರೋಗ್ಯಕರ ಆಹಾರ ಪದಾರ್ಥಗಳಾದ ಹುರಿದ ಕಡಲೆ, ಬಾದಾಮಿ, ಕರ್ಜೂರ, ಮೊದಲಾದವನ್ನು ಒದಗಿಸಲು ತಿಳಿಸಿದ್ದಾರೆ. "ಇಲಾಖೆಗಳ ಅಧಿಕೃತ ಸಭೆಗಳಲ್ಲಿ ಬಿಸ್ಕೆಟ್ಟುಗಳನ್ನು ಹೊರತುಪಡಿಸಿ ಆರೋಗ್ಯಕರ ತಿಂಡಿ-ತಿನಿಸುಗಳನ್ನು ಮಾತ್ರ ವಿತರಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಆದೇಶಿಸಿದೆ" ಎಂದು ಸಚಿವಾಲಯದ ಸುತ್ತೋಲೆ ತಿಳಿಸಿದೆ. 


ಫಾಸ್ಟ್ ಫುಡ್, ಬಿಸ್ಕೆಟ್ ಗಳು ಆರೋಗ್ಯಕ್ಕೆ ಒಳ್ಳೆಯದಲ್ಲವಾದ್ದರಿಂದ ಆರೋಗ್ಯ ಸಚಿವಾಲಯದ ಬಹುತೇಕ ಅಧಿಕಾರಿಗಳು ಈ ಆದೇಶವನ್ನು ಸ್ವಾಗತಿಸಿದ್ದಾರೆ.