ರಾಜ್ಯದ ಉಳಿದ ಮೂರು ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ! ಚಿಕ್ಕೋಡಿಯಲ್ಲಿ ಅಣ್ಣಾ ಸಾಹೇಬ್ ಜೊಲ್ಲೆ ಸ್ಪರ್ಧೆ
ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸಂಗಣ್ಣ ಕರಡಿ, ರಾಯಚೂರು ಕ್ಷೇತ್ರದಿಂದ ರಾಜಾ ಅಮ್ರೇಶ್ ನಾಯಕ್ ಮತ್ತು ಚಿಕ್ಕೋಡಿ ಕ್ಷೇತ್ರದಿಂದ ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ಟಿಕೆಟ್ ನೀಡಿ ಘೋಷಿಸಲಾಗಿದೆ.
ನವದೆಹಲಿ: ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 12ನೇ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕದ ಉಳಿದ ಮೂರು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಶುಕ್ರವಾರ ಘೋಷಣೆ ಮಾಡಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸಂಗಣ್ಣ ಕರಡಿ, ರಾಯಚೂರು ಕ್ಷೇತ್ರದಿಂದ ರಾಜಾ ಅಮ್ರೇಶ್ ನಾಯಕ್ ಮತ್ತು ಚಿಕ್ಕೋಡಿ ಕ್ಷೇತ್ರದಿಂದ ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ಟಿಕೆಟ್ ನೀಡಿ ಘೋಷಿಸಲಾಗಿದೆ.
ಚಿಕ್ಕೋಡಿ ಕ್ಷೇತ್ರದಿಂದ ಶಾಸಕ ಉಮೇಶ್ ಕಟ್ಟಿ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ನೀಡಲಾಗುತ್ತದೆ ಎನ್ನಲಾಗಿತ್ತು. 2009ರಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ರಮೇಶ್ ಕಟ್ಟಿ ವರಿಗೆ ಈ ಬಾರಿಯ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸಲು ಉಮೇಶ್ ಕತ್ತಿ ಹರಸಾಹಸ ಮಾಡಿದ್ದರು. ಗುರುವಾರವೂ ಸಹ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಟಿಕೆಟ್ ವಿಚಾರವಾಗಿ ಚರ್ಚೆ ನಡೆಸಿದ್ದರು. ಆದರೆ, ಕಡೇಕ್ಷಣದಲ್ಲಿ ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ಟಿಕೆಟ್ ನೀಡಲಾಗಿದ್ದು, ರಮೇಶ್ ಕತ್ತಿಗೆ ಟಿಕೆಟ್ ಕೈ ತಪ್ಪಿದೆ.
ಉಳಿದಂತೆ ಜಮ್ಮುಕಾಶ್ಮೀರದ ಲಡಾಕ್, ಮಧ್ಯಪ್ರದೇಶದ ಬಾಲಾಘಾಟ್, ರಾಜಘರ್, ಖರ್ಗೋನ್, ಮಹಾರಾಷ್ಟ್ರದ ಮಾಧ, ರಾಜಸ್ಥಾನದ ಚುರು, ಅಳ್ವಾರ್, ಬನ್ಸ್ವಾರಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದೆ.