ಬೆಂಗಳೂರು: ರಾಜ್ಯದ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ಕೇಂದ್ರದ ಕೈವಾಡವಿದೆ ಎಂದು ಮಾಜಿ ಸಿಎಂ ಹಾಗೂ ಸಮ್ಮಿಶ್ರ ಸರ್ಕಾರ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ಶಾಸಕರ ರಾಜೀನಾಮೆಯಿಂದಾಗಿ ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟ ಎದುರಾಗಿರುವ ಬೆನ್ನಲ್ಲೇ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಸಿದ್ಧರಾಮಯ್ಯ ಅವರು, ಕೇಂದ್ರ ಸರ್ಕಾರ ತನ್ನ ಅಂಗ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಾಮ ಮಾರ್ಗದ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಇಳಿದಿದೆ. ಇದರ ಹಿಂದೆ ರಾಜ್ಯ ಬಿಜೆಪಿ ನಾಯಕರಷ್ಟೇ ಅಲ್ಲ‌ ಕೇಂದ್ರದ ಕೈವಾಡ ಕೂಡ ಸ್ಪಷ್ಟವಾಗಿದೆ. ಆದರೆ ಈ ಬಾರಿ ಸರ್ಕಾರ ಬೀಳಿಸುವ ಪ್ರಯತ್ನದಲ್ಲಿ ಬಿಜೆಪಿ ತನ್ನ ಕೈವಾಡವೇ ಇಲ್ಲ ಎಂಬ ಹೊಸ ನಾಟಕ ಶುರುಮಾಡಿದೆ ಎಂದು ಕಿಡಿ ಕಾರಿದ್ದಾರೆ.


ಬಿಜೆಪಿಗೆ ಪ್ರಜಾಪಭುತ್ವದಲ್ಲಿ ನಂಬಿಕೆಯಿಲ್ಲ
ಬಿಜೆಪಿಗೆ ಪ್ರಜಾಪ್ರಭುತ್ವ ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ. ಅವರಿಗೆ ಸ್ಪಷ್ಟ ಬಹುಮತವೂ ಇಲ್ಲ, ಬೇರೆ ಪಕ್ಷಗಳ ಬೆಂಬಲವೂ ಇಲ್ಲ. ಆದರೂ ಸಹ ಅಸಂವಿಧಾನಿಕ ಮಾರ್ಗದ ಮೂಲಕ ಶಾಸಕರನ್ನು ತಮ್ಮತ್ತ ಸೆಳೆದುಕೊಂಡು ಸರ್ಕಾರ ರಚಿಸುವ ವಿಫಲ ಯತ್ನಕ್ಕೆ ಕೈಹಾಕಿದೆ.‌ ಇದೂ ಸಹ ಹಿಂದಿನಂತೆ ಯಶಸ್ವಿಯಾಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


ಆಪರೇಷನ್ ಕಮಲ ಯಶಸ್ವಿಯಾಗುವುದಿಲ್ಲ
 2008 ರಲ್ಲಿ ಯಡಿಯೂರಪ್ಪನವರು ಇದೇ ರೀತಿ ನಮ್ಮ ಶಾಸಕರಿಂದ ರಾಜೀನಾಮೆ ಕೊಡಿಸಿ, ಕೋಟ್ಯಂತರ ಹಣ ಸುರಿದು ಉಪಚುನಾವಣೆಯಲ್ಲಿ ಗೆಲ್ಲಿಸುವ ಪ್ರಯತ್ನ ಮಾಡಿದ್ದರು. ಅದರ ಮುಂದುವರಿದ ಭಾಗವೇ ಈ ಬಾರಿಯ ಆಪರೇಷನ್ ಕಮಲ. ಈ ಹಿಂದೆ ಐದು ಬಾರಿ ಸರ್ಕಾರ ಬೀಳಿಸುವ ವಿಫಲ ಯತ್ನ ಮಾಡಿದ್ದರು. ಅದಕ್ಕೆ ಈ ಬಾರಿಯ ಪ್ರಯತ್ನ ಇನ್ನೊಂದು ಹೊಸ ಸೇರ್ಪಡೆಯಾಗುತ್ತದೆ ಅಷ್ಟೆ. ಇದರಲ್ಲಿ ಅವರಿಗೆ ಖಂಡಿತಾ ಯಶಸ್ಸು ಸಿಗುವುದಿಲ್ಲ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಪಕ್ಷದ ಭವಿಷ್ಯವೇ ಮುಖ್ಯ
ನಮ್ಮ ಪಕ್ಷದಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಸಹಜವಾಗಿ ಕೆಲವರಿಗೆ ಬೇಸರವಿದೆ. ಅದನ್ನು ಸರಿಪಡಿಸುವುದಕ್ಕಾಗಿ ನಮ್ಮ ಮಂತ್ರಿಗಳೆಲ್ಲರೂ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದು, ಪಕ್ಷದ ಭವಿಷ್ಯ ಮುಖ್ಯವೇ ಹೊರತು ವೈಯಕ್ತಿಕ ಸ್ಥಾನಮಾನ ಮುಖ್ಯವಲ್ಲ ಎಂಬ ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಂತ್ರಿ ಸ್ಥಾನದಿಂದ ವಂಚಿತರಾದ ಕಾರಣಕ್ಕೆ ರಾಜೀನಾಮೆ ನೀಡುತ್ತಿರುವ ಶಾಸಕರು ಬಿಜೆಪಿಯ ಆಮಿಷಗಳಿಗೆ ಬಲಿಯಾಗದೆ ರಾಜೀನಾಮೆ ವಾಪಸ್ಸು ಪಡೆಯಿರಿ, ನಿಮ್ಮ ಸಮಸ್ಯೆಗಳನ್ನು ಆಲಿಸಿ ತಕ್ಷಣ ಪರಿಹಾರ ಮಾಡುತ್ತೇವೆ ಎಂದು ಪಕ್ಷದ ಪರವಾಗಿ ನಾನು ಮನವಿ ಮಾಡುತ್ತಿದ್ದೇನೆ.


ನಾವು ಈಗಾಗಲೇ ಮಂತ್ರಿಮಂಡಲ ಪುನರ್ ರಚನೆ ನಿರ್ಧಾರಕ್ಕೆ ಸಹ ಬಂದಿದ್ದೇವೆ. ಯಾರೂ ಕೂಡ ಆತುರದ ನಿರ್ಧಾರ ಕೈಗೊಳ್ಳುವುದು ಬೇಡ, ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ನಾಯಕರು ಎಲ್ಲರೂ ತಮ್ಮೊಂದಿಗಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.