`ಫೆಬ್ರವರಿ 8ಕ್ಕೆ ಭಾರತ-ಪಾಕ್ ಮಧ್ಯೆ ಕದನ` ಎಂದ ಬಿಜೆಪಿ ಮುಖಂಡ
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ ಮುಖಂಡ ಫೆಬ್ರವರಿ 8ಕ್ಕೆ ದೆಹಲಿಯಲ್ಲಿ ಭಾರತ-ಪಾಕ್ ಮಧ್ಯೆ ಯುದ್ಧ ನಡೆಯಲಿದೆ ಎಂದಿದ್ದಾರೆ.
ನವದೆಹಲಿ:ರಾಷ್ಟ್ರರಾಜಧಾನಿ ದೆಹಲಿಯ ಶಾಹೀನ್ ಬಾಗ್ ಮತ್ತು ಇತರ ಸ್ಥಳಗಳಲ್ಲಿ CAA ಕಾಯ್ದೆಯನ್ನು ವಿರೋಧಿಸಿ ನಡೆಸಲಾಗುತ್ತಿರುವ ಪ್ರತಿಭಟನೆಗಳ ವಿರುದ್ಧ ಕಿಡಿಕಾರಿರುವ ದೆಹಲಿ BJP ಮುಖಂಡ ಕಪಿಲ್ ಮಿಶ್ರಾ, ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳನ್ನು ಭಾರತ ಮತ್ತು ಪಾಕ್ ನಡುವಿನ ಕಾಳಗ ಎಂದು ಸಾರಿದ್ದಾರೆ. ಅರವಿಂದ್ ಕೆಜ್ರಿವಾಲ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಕಪಿಲ್ ಮಿಶ್ರಾ ಸದ್ಯ BJPಯಲ್ಲಿದ್ದು, ದೆಹಲಿಯ ಮಾಡೆಲ್ ಟೌನ್ ನಿಂದ BJP ಟಿಕೆಟ್ ಮೇಲೆ ಚುನಾವಣಾ ಕಣಕ್ಕೆ ಇಳಿದಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಕಪಿಲ್ ಮಿಶ್ರಾ, ಫೆಬ್ರವರಿ 8 ರಂದು ದೆಹಲಿಯಲ್ಲಿ ಭಾರತ ವಿರುದ್ಧ ಪಾಕ್ ಕದನ ನಡೆಯಲಿದೆ ಎಂದಿದ್ದಾರೆ. ಫೆಬ್ರವರಿ 8ರಂದು ದೆಹಲಿ ರಸ್ತೆಗಳ ಮೇಲೆ ಭಾರತ ವಿರುದ್ಧ ಪಾಕಿಸ್ತಾನ ಕಾಳಗ ನಡೆಯಲಿದೆ ಎಂದಿದ್ದಾರೆ. ಅಷ್ಟೇ ಅಲ್ಲ ದೆಹಲಿಯ ಶಾಹೀನ್ ಬಾಗ್ ನಲ್ಲಿ ಈಗಾಗಲೇ ಪಾಕಿಸ್ತಾನ ಎಂಟ್ರಿ ನೀಡಿದ್ದು, ದೆಹಲಿಯ ಹಲವು ಕಡೆಗಳಲ್ಲಿ ಚಿಕ್ಕ ಚಿಕ್ಕ ಪಾಕಿಸ್ತಾನಗಳನ್ನು ನಿರ್ಮಿಸಲಾಗುತ್ತಿದೆ ಎಂದಿದ್ದಾರೆ. ತನ್ನ ಟ್ವೀಟ್ ನಲ್ಲಿ ಆರೋಪ ಮಾಡಿರುವ BJP ಮುಖಂಡ ದೆಹಲಿಯ ಶಾಹೀನ್ ಬಾಗ್, ಚಾಂದ್ ಬಾಗ್ ಹಾಗೂ ಇಂದ್ರಲೋಕ್ ಪ್ರದೇಶಗಳಲ್ಲಿ ದೇಶದ ಕಾನೂನಿಗೆ ವಿರೋಧ ವ್ಯಕ್ತವಾಗುತ್ತಿದೆ ಮತ್ತು ದೆಹಲಿಯ ರಸ್ತೆಗಳನ್ನು ಪಾಕ್ ದಾಂಧಲೆಕೋರರು ಕಬಳಿಸಿದ್ದಾರೆ ಎಂದಿದ್ದಾರೆ. ಅಷ್ಟೇ ಅಲ್ಲ ಫೆಬ್ರವರಿ 8ರಂದು ದೆಹಲಿಯಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ BJP ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಮಿಶ್ರಾ, ಫೆಬ್ರವರಿ 11, 2020ರ ಬೆಳಗ್ಗೆ 11 ಗಂಟೆಗೆ ಘುಂಘರು ಸೇಠ್ (ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್) ರಾಜೀನಾಮೆ ನೀಡಲಿದ್ದಾರೆ ಎಂದಿದ್ದಾರೆ.
AAP ಪಕ್ಷದ ಅಖಿಲೇಶಪತಿ ತ್ರಿಪಾಠಿ ವಿರುದ್ಧ ಕಪಿಲ್ ಮಿಶ್ರಾ ಸ್ಪರ್ಧೆ
BJP ಸಂಘಟನೆ ಹಾಗೂ ಕಾರ್ಯಕರ್ತರಲ್ಲಿನ ಹುಮ್ಮಸ್ಸು, ಒಗ್ಗಟ್ಟು ನೋಡಿ ತಾವು ಈ ಟ್ವೀಟ್ ಬರೆಯುತ್ತಿರುವುದಾಗಿ ಹೇಳಿರುವ ಕಪಿಲ್ ಮಿಶ್ರಾ, ಯಾವುದೇ ಪೇಡ್ ಸರ್ವೇ, ದುಬಾರಿ ಜಾಹೀರಾತು, ಮಾರಾಟಗೊಂಡ ಸಂದರ್ಶನಗಳು ಈ ಬಾರಿ ಅರವಿಂದ್ ಕೆಜ್ರಿವಾಲ್ ಅವರನ್ನು ರಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಆಮ್ ಆದ್ಮಿ ಪಕ್ಷದ ಮಾಜಿ ಶಾಸಕರಾಗಿದ್ದ ಕಪಿಲ್ ಮಿಶ್ರಾ ಅವರನ್ನು, 2017ರಲ್ಲಿ ಅರವಿಂದ್ ಕೆಜ್ರಿವಾಲ್ ತಮ್ಮ ಮಂತ್ರಿಮಂಡಲದಿಂದ ಕೈಬಿಟ್ಟಿದ್ದರು. ಕಳೆದ ವರ್ಷ ಪಕ್ಷಾಂತರ ಕಾಯ್ದೆ ಅಡಿ ಕಪಿಲ್ ಮಿಶ್ರಾ ನಿಷೇಧಕ್ಕೆ ಒಳಗಾಗಿದ್ದರು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಪಿಲ್ ಮಿಶ್ರಾ ಆಮ್ ಆದ್ಮಿ ಪಕ್ಷದ ಶಾಸಕ ಅಖಿಲೇಶಪತಿ ತ್ರಿಪಾಠಿ ವಿರುದ್ಧ ಸ್ಪರ್ಧಿಸಲಿದ್ದಾರೆ.