ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ನಾಯಕನಿಗೆ ಗುಂಡಿಕ್ಕಿ ಹತ್ಯೆ
ಗುಲ್ ಮೊಹಮ್ಮದ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆಯಲ್ಲೇ ಕೊನೆಯುಸಿರೆಳೆದರು.
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಬಿಜೆಪಿ ನಾಯಕ, ಅನಂತ್ ನಾಗ್ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷ ಗುಲ್ ಮೊಹಮ್ಮದ್ ಮೀರ್ ಅವರ ಮನೆಗೆ ನುಗ್ಗಿದ ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು.
ಅನಂತ್ನಾಗ್ ಜಿಲ್ಲೆಯ ನೌಗಮ್ನಲ್ಲಿರುವ ಗುಲ್ ಮೊಹಮ್ಮದ್ ಅವರ ಮನೆಗೆ ನುಗ್ಗಿದ ಮೂವರು ಉಗ್ರರು ಅವರ ಕಾರಿನ ಕೀ ಕೇಳಿದ್ದಾರೆ. ಬಳಿಕ ಕಾರ್ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಆ ಕ್ಷೇತ್ರದಲ್ಲಿ ಗುಲ್ ಮೊಹಮ್ಮದ್ ಮೀರ್ 'ಅಟಲ್' ಎಂದೇ ಹೆಸರಾಗಿದ್ದರು.
ಗುಲ್ ಮೊಹಮ್ಮದ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆಯಲ್ಲೇ ಕೊನೆಯುಸಿರೆಳೆದರು. ಅವರ ಎದೆಗೆ ಮೂರು ಗುಂಡು ಹಾಗೂ ಹೊಟ್ಟೆಗೆ ಎರಡು ಗುಂಡು ಸೇರಿ ಒಟ್ಟು ಐದು ಗುಂಡುಗಳನ್ನು ಹಾರಿಸಲಾಗಿದೆ. ಸದ್ಯ ಶಂಕಿತ ಉಗ್ರರನ್ನು ಬಂಧಿಸಲು ಭದ್ರತಾ ಪಡೆ ನೌಗಾಂ ಪ್ರದೇಶವನ್ನು ಸುತ್ತುವರೆದಿದೆ. ಉಗ್ರರಿಗಾಗಿ ಸೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.