ಮುಂಬೈ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ ಎಂದು ಎನ್​ಸಿಪಿ ಮುಖಂಡ ಶರದ್ ಪವಾರ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, "ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಮತ್ತು ಸರ್ಕಾರ ರಚಿಸಲು ಮೈತ್ರಿಕೂಟದ ಬೆಂಬಲವನ್ನೂ ಪಡೆಯಬಹುದು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡನೇ ಅವಧಿಗೆ ಆ ಹುದ್ದೆ ಅಲಂಕರಿಸುವುದು ಅಸಂಭವ" ಎಂದು ಹೇಳಿದರು.


ಮಾರ್ಚ್ 14 ಮತ್ತು 15 ರಂದು ದೆಹಲಿಯಲ್ಲಿ ಹಲವು ಪ್ರಾದೇಶಿಕ ಪಕ್ಷಗಳೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದ ಮಾಜಿ ಕೇಂದ್ರ ಸಚಿವ ಶರದ್ ಪವಾರ್, ಈ ಸಮಯದಲ್ಲಿ ಮಹಾಘಟಬಂಧನ್ ಬಗ್ಗೆ ಚರ್ಚಿಸಲಾಗುವುದು ಎಂದರು.


ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್​ಸಿಪಿ ಮೈತ್ರಿಕೂಟದಿಂದ ಕೆಲವು ಪ್ರಾದೇಶಿಕ ಪಕ್ಷಗಳು ಹೊರಬರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪವಾರ್, "ಲೋಕಸಭಾ ಚುನಾವಣೆಯಲ್ಲಿ ಎನ್​ಸಿಪಿಗೆ ಬೆಂಬಲಿಸಿರುವುದಕ್ಕಾಗಿ ನಾನು ಪಿಡಬ್ಲ್ಯೂಪಿ ಯನ್ನು ಅಭಿನಂದಿಸುತ್ತೇನೆ. ಎನ್​ಸಿಪಿ ಸ್ವಾಭಿಮಾನಿ ಶೆಟ್ಕರಿ ಸಂಗತ್ನಾ(ಎಸ್ಎಸ್ಎಸ್) ಜೊತೆಗೂ ಸಹ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಸಿದೆ. ಆದರೆ ರೈತಾಪಿ ವರ್ಗದಿಂದ ಕಾಂಗ್ರೆಸ್ ಬಗ್ಗೆ ಕೆಲವು ನಿರೀಕ್ಷೆಗಳಿವೆ. ಉಭಯ ಪಕ್ಷಗಳು ಈ ಬಗ್ಗೆ ನಿರ್ಧರಿಸಲಿವೆ" ಎಂದು ಹೇಳಿದರು.