ಲೋಕಸಭೆ ಸ್ಪೀಕರ್ ಆಗಿ ಬಿಜೆಪಿ ಸಂಸದ ಓಂ ಬಿರ್ಲಾ ಅವಿರೋಧ ಆಯ್ಕೆ
ಲೋಕಸಭೆಯಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಓಂ ಬಿರ್ಲಾ ಅವರನ್ನು ಬೆಂಬಲಿಸಿದ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನವದೆಹಲಿ: ಭಾರತೀಯ ಜನತಾ ಪಕ್ಷದ ಸಂಸದ ಓಂ ಬಿರ್ಲಾ ಅವರು 17ನೇ ಲೋಕಸಭೆಯ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಓಂ ಬಿರ್ಲಾ ಅವರನ್ನು ಬೆಂಬಲಿಸಿದ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜಸ್ಥಾನದ ಕೋಟ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿ ಸಂಸದರಾಗಿರುವ ಓಂ ಬಿರ್ಲಾ ಅವರು, 17ನೇ ಲೋಕಸಭಾ ಚುನಾವಣೆಯಲ್ಲಿ ಕೋಟಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಮನಾರಾಯಣ ಮೀನಾ ಅವರನ್ನು 2.5 ಲಕ್ಷ ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.
ಲೋಕಸಭೆ ಸ್ಪೀಕರ್ ಆಗಿ ಆಯ್ಕೆಗೊಂಡ ಬಿರ್ಲಾ ಅವರಿಗೆ ಪ್ರಧಾನಿ ಮೋದಿ ಅಭಿನಂದಿಸಿದ್ದು, "ಇದು ಸದನಕ್ಕೆ ಬಹಳ ಹೆಮ್ಮೆಯ ವಿಚಾರವಾಗಿದೆ. ಲೋಕಸಭೆಯ ಸ್ಪೀಕರ್ ಆಗಿ ಸರ್ವಾನುಮತದಿಂದ ಓಂ ಬಿರ್ಲಾ ಅವರಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಅವರಿಗೆ ನಾವು ಅಭಿನಂದಿಸುತ್ತೇವೆ. ಬಹಳಷ್ಟು ಸಂಸದರು ಬಿರ್ಲಾ ಜೀ ಅವರ ಬಗ್ಗೆ ತಿಳಿದಿದ್ದಾರೆ. ರಾಜಸ್ಥಾನದಲ್ಲೂ ಬಿರ್ಲಾ ಅವರು ಸಾಕಷ್ಟು ಸೇವೆ ಸಲ್ಲಿಸಿದ್ದಾರೆ" ಎಂದಿದ್ದಾರೆ.
"ವೈಯಕ್ತಿಕವಾಗಿ, ಓಂ ಬಿರ್ಲಾ ಜಿ ಅವರೊಂದಿಗೆ ದೀರ್ಘಕಾಲ ಕೆಲಸ ಮಾಡಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅವರು ಕೋಟಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಇದೊಂದು ಮಿನಿ ಇಂಡಿಯಾ ಇದ್ದಂತೆ. ಶಿಕ್ಷಣ ಮತ್ತು ಕಲಿಕೆಗೆ ಸಂಬಂಧಿಸಿದ ಭೂಮಿ. ಸಾರ್ವಜನಿಕ ಜೀವನದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರು ವಿದ್ಯಾರ್ಥಿ ನಾಯಕನಾಗಿ ತಮ್ಮ ಸೇವೆ ಆರಂಭಿಸಿ, ಇಲ್ಲಿವರೆಗೂ ಸಮಾಜಕ್ಕೆ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ" ಎಂದು ಮೋದಿ ಹೇಳಿದರು.