ಬಿಜೆಪಿ ಸಂಸದ ಮುರಳಿ ಮನೋಹರ್ ಜೋಶಿ ಅವರ `ಜಿಡಿಪಿ ವರದಿ`ಗೆ ಬಿಜೆಪಿ ಸಂಸದರಿಂದಲೇ ವಿರೋಧ!
ಬಿಜೆಪಿಯ ಮುರಳಿ ಮನೋಹರ್ ಜೋಶಿ ಅವರ ಸಂಸತ್ತಿನ ಅಂದಾಜು ಸಮಿತಿಯ ವರದಿಗೆ ಈಗ ಬಿಜೆಪಿ ಸಂಸದರೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ನವದೆಹಲಿ: ಬಿಜೆಪಿಯ ಮುರಳಿ ಮನೋಹರ್ ಜೋಶಿ ಅವರ ಸಂಸತ್ತಿನ ಅಂದಾಜು ಸಮಿತಿಯ ವರದಿಗೆ ಈಗ ಬಿಜೆಪಿ ಸಂಸದರೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಮುರಳಿ ಮನೋಹರ್ ಜೋಶಿ ಅವರು ಸಂಸತ್ತಿನ 30 ಸದಸ್ಯರನ್ನೋಳಗೊಂಡ ಅಂದಾಜು ಸಮಿತಿ ಮುಖ್ಯಸ್ಥರಾಗಿದ್ದಾರೆ. ಈಗ ಅವರ ನೇತೃತ್ವದ ಈ ಸಮಿತಿ ಭಾರತದ ಜಿಡಿಪಿ ಬೆಳವಣಿಗೆ ಕುರಿತಾಗಿ 'ಅಳತೆ, ಉದ್ಯೋಗ ಮತ್ತು ಆದಾಯ' ಎನ್ನುವ ವರದಿಯನ್ನು ಸಿದ್ಧಪಡಿಸಿದೆ.
ಈ ವರದಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆಯನ್ನು ಗಣನೆಗೆ ತೆಗೆದುಕೊಳ್ಳುವ ವಿಧಾನವನ್ನು ಪರಿಶೀಲಿಸಬೇಕೆಂದು ವರದಿ ಶಿಫಾರಸು ಮಾಡಿದೆ. ಇದಕ್ಕೆ ಈಗ ನಿಷಿಕಂತ್ ದುಬೆ ನೇತೃತ್ವದ ಬಿಜೆಪಿ ಸಂಸದರು ಈ ವರದಿಯನ್ನು ಪ್ರಸ್ತುತ ರೂಪದಲ್ಲಿ ಅಳವಡಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಮತ್ತೊಂದೆಡೆ ಸಮಿತಿಯ ಮುಖಸ್ಥರಾಗಿರುವ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಅವರು ಈ ವರದಿಯನ್ನು ಅಳವಡಿಸಿಕೊಳ್ಳುವುದರ ಬಗ್ಗೆ ಉತ್ಸುಕರಾಗಿದ್ದಾರೆ ಎಂದು ತಿಳಿದು ಬಂದಿದೆ.
"ಜಿಡಿಪಿ ದತ್ತಾಂಶವನ್ನು ಲೆಕ್ಕಾಚಾರ ಮಾಡುವ ಸರ್ಕಾರದ ಕಾರ್ಯವಿಧಾನವನ್ನು ಪ್ರಶ್ನಿಸುವುದು ತಪ್ಪು" ಎಂದು ಪಿಟಿಐಗೆ ಬಿಜೆಪಿ ಸಂಸದರೊಬ್ಬರು ತಿಳಿಸಿದ್ದಾರೆ.ಒಟ್ಟು 30 ಸದಸ್ಯರ ಸಮಿತಿಯಲ್ಲಿ ಮುರಳಿ ಮನೋಹರ್ ಜೋಷಿ ಅವರನ್ನು ಹೊರಟು ಪಡಿಸಿ ಬಿಜೆಪಿಯ 15 ಸಂಸದರು ಈ ಸಮಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಭಾರತದ ಜಿಡಿಪಿ ಬೆಳವಣಿಗೆಯನ್ನು ಲೆಕ್ಕ ಹಾಕುವ ಸರ್ಕಾರದ ವಿಧಾನವು ಹಿಂದಿನ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಮುಂತಾದ ಅರ್ಥಶಾಸ್ತ್ರಜ್ಞರಿಂದ ಟೀಕಿಸಲ್ಪಟ್ಟಿತ್ತು. ಈ ಹಿನ್ನಲೆಯಲ್ಲಿ ಮುರಳಿ ಮನೋಹರ್ ಜೋಶಿ ನೇತೃತ್ವದ ಸಮಿತಿ ಜಿಡಿಪಿ ಬೆಳವಣಿಗೆ ಕುರಿತಾದ ಬೆಳವಣಿಗೆ ವಿಧಾನವನ್ನು ಮರುಪರಿಶೀಲನೆ ಒಳಪಡಿಸಬೇಕು ಎಂದು ತನ್ನ ಕರಡು ವರದಿಯಲ್ಲಿ ಹೇಳಿದೆ.