ನವದೆಹಲಿ: ಕರ್ನಾಟಕದಲ್ಲಿ ಆಪರೇಶನ್ ಕಮಲದ ಸದ್ದು ಜೋರಾಗಿಯೇ ಇದೇ. ರಾಜ್ಯ ಬಿಜೆಪಿ ಶಾಸಕರು ಗುರುಗ್ರಾಮದ ರೆಸಾರ್ಟ್ ನಲ್ಲಿದ್ದಾರೆ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ನಾವು ದೆಹಲಿಗೆ ಬಂದಿದ್ದು ಲೋಕಸಭೆ ಚುನಾವಣೆಗೆ ಪಕ್ಷದ ಕಾರ್ಯತಂತ್ರ ರೂಪಿಸುವ ಬಗ್ಗೆ ಚರ್ಚೆ ಮಾಡುವ ಸಲುವಾಗಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳುತ್ತಿದ್ದಾರೆ. ಆದರೆ ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮಗೆ ಅನಾರೋಗ್ಯ ಎಂದು ಟ್ವೀಟ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಹೆಚ್1 ಎನ್1 ಸೋಂಕಿಗೆ ತುತ್ತಾಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸದ್ಯ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಷಯವನ್ನು ಟ್ವೀಟ್ ಮೂಲಕ ತಿಳಿಸಿರುವ ಅಮಿತ್ ಶಾ, "ನಾನು ಹೆಚ್1 ಎನ್1 ನಿಂದ ಬಾಧಿತನಾದಿದ್ದೇವೆ. ದೇವರ ದಯೆಯಿಂದ, ನಿಮ್ಮ ಪ್ರೀತಿ ಮತ್ತು ಹಾರಿಕೆಯಿಂದ ಶೀಘ್ರ ಗುಣಮುಖನಾಗಲಿದ್ದೇವೆ" ಎಂದು ಹೇಳಿದ್ದಾರೆ.


ಏಮ್ಸ್ ಮೂಲಗಳ ಪ್ರಕಾರ, ಎದೆ ಬಿಗಿತ ಮತ್ತು ಉಸಿರಾಟದ ತೊಂದರೆಯಿಂದಾಗಿ ಅಮಿತ್ ಶಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾತ್ರಿ ಸುಮಾರು ಒಂಬತ್ತು ಗಂಟೆಗೆ ಶಾ ಆಸ್ಪತ್ರೆಗೆ ದಾಖಲಾಗಿದ್ದು, ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಅವರ ಮೇಲ್ವಿಚಾರಣೆಯಲ್ಲಿ ಶಾ ಗೆ ಚಿಕಿತ್ಸೆ ನೀಡಲಾಗುತ್ತಿದೆ.


ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಗೃಹ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದು, "ಅಮಿತ್ ಭಾಯ್ ನೀವು ಶೀಘ್ರವೇ ಗುಣಮುಖರಾಗುವಂತೆ ಈಶ್ವರನಲ್ಲಿ ನಾನು ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.