ಲೋಕಸಭಾ ಚುನಾವಣೆ: ಬಿಜೆಪಿಯಿಂದ ಮತ್ತೊಂದು ಪಟ್ಟಿ ರಿಲೀಸ್, ರಮಣ್ ಸಿಂಗ್ ಪುತ್ರನಿಗಿಲ್ಲ ಟಿಕೆಟ್!
9 ಜನರ ಪಟ್ಟಿಯಲ್ಲಿ ಛತ್ತೀಸ್ಗಢದ ಆರು ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ.
ನವದೆಹಲಿ: 2019ರ ಲೋಕಸಭಾ ಚುನಾವಣೆಗಾಗಿ ಬಿಜೆಪಿ 9 ಅಭರ್ತಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಛತ್ತೀಸ್ಗಢ, ತೆಲಂಗಾಣ, ಮೇಘಾಲಯ ಮತ್ತು ಮಹಾರಾಷ್ಟ್ರ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.
ಈ ಪಟ್ಟಿಯಲ್ಲಿ ಬಿಜೆಪಿ ಛತ್ತೀಸ್ಗಢದ 6, ತೆಲಂಗಾಣದ 1, ಮೇಘಾಲಯದ 1 ಮತ್ತು ಮಹಾರಾಷ್ಟ್ರದ 1 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಿದೆ.
9 ಜನರ ಪಟ್ಟಿಯಲ್ಲಿ ಛತ್ತೀಸ್ಗಢದ ಆರು ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ಛತ್ತೀಸ್ಗಢದ ರಾಜ್ ನಂದಗಾವ್ ಕ್ಷೇತ್ರದಿಂದ ಸಂತೋಷ್ ಪಾಂಡೆ, ರಾಯ್ಪುರ ದಿಂದ ಸುನಿಲ್ ಸೋನಿ, ಬಿಲಾಸ್ಪುರ್ ದಿಂದ ಅರುಣ್ ಸಾವ್, ದುರ್ಗದಿಂದ ವಿಜಯ್ ಬಗೆಲ್, ಕೊರ್ಬಾದಿಂದ ಜ್ಯೋತಿ ನಂದ ದೂಬೆ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಪುತ್ರನಿಗೆ ಟಿಕೆಟ್ ನೀದಲಾಗಿಲ್ಲ. ರಮಣ್ ಸಿಂಗ್ ಪುತ್ರ ಅಭಿಷೇಕ್ ಸಿಂಗ್ ಅವರು ರಾಜ್ ನಂದಗಾವ್ ಕ್ಷೇತ್ರದ ಮಾಜಿ ಸಂಸದರಾಗಿದ್ದಾರೆ.
ಛತ್ತೀಸ್ಗಢದ ಹಾಲಿ ಸಂಸದರಿಗೆ ಈ ಬಾರಿ ಟಿಕೆಟ್ ನೀಡಲಾಗುವುದಿಲ್ಲ ಎಂದು ಬಿಜೆಪಿ ಪಟ್ಟಿ ಬಿಡುಗಡೆಗೂ ಮೊದಲೇ ಸ್ಪಷ್ಟಪಡಿಸಿತ್ತು. ಆದರೆ ಸತತ 15 ವರ್ಷ ಛತ್ತೀಸ್ಗಢದ ಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ರಮಣ್ ಸಿಂಗ್ ಅವರ ಪುತ್ರನಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂದು ನಂಬಲಾಗಿತ್ತು. ಅದಾಗ್ಯೂ ರಮಣ್ ಸಿಂಗ್ ಪುತ್ರನಿಗೆ ಟಿಕೆಟ್ ದೊರೆಯದೇ ಇರುವುದು ಅವರಿಗೆ ಬಾರಿ ಹಿನ್ನಡೆಯಾದಂತಾಗಿದೆ.