ಉತ್ತರಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಯಿಂದ ಬಿಜೆಪಿಗೆ ವಿಶ್ರಾಂತಿ ಇಲ್ಲ-ಅಖಿಲೇಶ್ ಯಾದವ್
ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಸ್ಪಿ ಮತ್ತು ಬಿಎಸ್ಪಿ ಮೈತ್ರಿಯಿಂದಾಗಿ ಬಿಜೆಪಿಗೆ ವಿಶ್ರಾಂತಿ ಇಲ್ಲದ ಹಾಗೆ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ನವದೆಹಲಿ: ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಸ್ಪಿ ಮತ್ತು ಬಿಎಸ್ಪಿ ಮೈತ್ರಿಯಿಂದಾಗಿ ಬಿಜೆಪಿಗೆ ವಿಶ್ರಾಂತಿ ಇಲ್ಲದ ಹಾಗೆ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಅಲ್ಲದೆ ಈ ಮೈತ್ರಿಯಿಂದಾಗಿ ಈಗ ಬಿಜೆಪಿ ಕಾರ್ಯಕರ್ತರು ಕೂಡ ಎಲ್ಲ ಆಸೆಯನ್ನು ಕಳೆದುಕೊಂಡು ನಿರಾಸೆಯಾಗಿದ್ದಾರೆ ಎಂದರು.ಇದೇ ವೇಳೆ ಪ್ರಧಾನಿ ಮೋದಿ "ಮೇರಾ ಬೂತ್ ಸಬ್ಸೆ ಮಜಬೂತ್" ಎನ್ನುವ ಹೇಳಿಕೆಗೆ ಟಾಂಗ್ ನೀಡಿರುವ ಅಖಿಲೇಶ್ ಯಾದವ್ ಈಗ ಎಸ್ಪಿ-ಬಿಎಸ್ಪಿ ಮೈತ್ರಿಯಿಂದಾಗಿ ಬಿಜೆಪಿ ಕಾರ್ಯಕರ್ತರು ಮೇರಾ ಬೂತ್ ಹುಅ ಚಕ್ನಾಚೋರ್ (ನನ್ನ ಬೂತ್ ಒಡೆದುಹೋಗಿದೆ)ಎಂದು ಹೇಳುತ್ತಿದ್ದಾರೆ ಎಂದರು.
ಈ ಹಿಂದೆ ಬದ್ದ ವೈರಿಗಳಾಗಿದ್ದ ಎಸ್ಪಿ-ಬಿಎಸ್ಪಿ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆಗೆ 38-38 ಸೂತ್ರದಂತೆ ಸ್ಥಾನಗಳನ್ನು ಹಂಚಿಕೊಂಡಿದ್ದಾರೆ ಉಳಿದಿರುವ ನಾಲ್ಕು ಸ್ಥಾನಗಳಲ್ಲಿ ಎರಡು ಕಾಂಗ್ರೆಸ್ ಪಕ್ಷದ ಗಾಂಧಿ ಕುಟುಂಬಕ್ಕೆ ಮೀಸಲಾಗಿದ್ದರೆ, ಉಳಿದ ಎರಡು ಸ್ಥಾನ ಮೈತ್ರಿಕೂಟದ ಪಕ್ಷದ ಪಾಲಾಗಿವೆ.
ಶನಿವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅಖಿಲೇಶ್ ಯಾದವ್ ಮಾತನಾಡುತ್ತಾ ಈ ಹಿಂದೆ ಉತ್ತರ ಪ್ರದೇಶ ಹಲವಾರು ಪ್ರಧಾನ ಮಂತ್ರಿಗಳನ್ನು ನೀಡಿದೆ ಆದ್ದರಿಂದ ಈ ಬಾರಿ ಉತ್ತರಪ್ರದೇಶದವರೆ ಪ್ರಧಾನಮಂತ್ರಿ ಅಭ್ಯರ್ಥಿಯಾದರೆ ಸಂತೋಷ ಎನ್ನುವ ಮೂಲಕ ಮಾಯಾವತಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗುವುದಕ್ಕೆ ಅಖಿಲೇಶ್ ಬೆಂಬಲ ಸೂಚಿಸಿದರು.