ಪ.ಬಂಗಾಳ ಉಪ ಚುನಾವಣೆ ಫಲಿತಾಂಶ: ಇವಿಎಂ ಮೇಲೆ ಸಂಶಯ ವ್ಯಕ್ತಪಡಿಸಿದ ಬಿಜೆಪಿ
ಪಶ್ಚಿಮ ಬಂಗಾಳದಲ್ಲಿ ನಡೆದ ಉಪಚುನಾವಣೆಯಲ್ಲಿ ಎಲ್ಲಾ ಮೂರು ಸ್ಥಾನಗಳನ್ನು ಕಳೆದುಕೊಂಡ ನಂತರ ಭಾರತೀಯ ಜನತಾ ಪಾರ್ಟಿ ಈಗ ಮತಯಂತ್ರದ ಮೇಲೆ ಸಂಶಯ ವ್ಯಕ್ತಪಡಿಸಿದೆ.
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಡೆದ ಉಪಚುನಾವಣೆಯಲ್ಲಿ ಎಲ್ಲಾ ಮೂರು ಸ್ಥಾನಗಳನ್ನು ಕಳೆದುಕೊಂಡ ನಂತರ ಬಿಜೆಪಿ ಈಗ ಮತಯಂತ್ರದ ಮೇಲೆ ಸಂಶಯ ವ್ಯಕ್ತಪಡಿಸಿದೆ.
ಈ ವಿಚಾರವಾಗಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ 'ರಾಜ್ಯ ಅಧಿಕಾರ ವರ್ಗ ಆಡಳಿತಾರೂಡ ತೃಣಮೂಲ ಕಾಂಗ್ರೆಸ್ಗೆ ಬಹಿರಂಗವಾಗಿ ಸಹಾಯ ಮಾಡಿವೆ ಮತ್ತು ಇದನ್ನು ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ 'ಚುನಾವಣಾ ಆಯೋಗವು ಎಲ್ಲಾ ಚುನಾವಣೆಗಳ ಮೇಲೆ ನಿಗಾ ಇಟ್ಟರೂ ಉಪಚುನಾವಣೆಯಲ್ಲಿ ದುರುಪಯೋಗಪಡಿಸಿಕೊಳ್ಳಲಾಗಿದೆ.ಉಪ ಚುನಾವಣೆಯಲ್ಲಿ ಗೆಲ್ಲಲು ಟಿಎಂಸಿ ಏನು ಬೇಕಾದರೂ ಮಾಡಬಹುದು ಎಂದು ಹೇಳಿದ್ದಾರೆ. ಇವಿಎಂಗಳ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದ ಅವರು, “ಇವಿಎಂಗಳೊಂದಿಗೆ ಏನು ಬೇಕಾದರೂ ಮಾಡಬಹುದು. ಎಣಿಕೆಯಲ್ಲಿ ಆಡಳಿತ ಪಕ್ಷದ ಅವ್ಯವಹಾರವನ್ನು ನೀವು ನಿರಾಕರಿಸುವ ಹಾಗಿಲ್ಲ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಅನುಮಾನದ ಹಿಂದಿನ ಕಾರಣಗಳನ್ನು ಉಲ್ಲೇಖಿಸಿದ ಸಿನ್ಹಾ, “ಲೋಕಸಭಾ ಚುನಾವಣೆಯ ಸಮಯದಲ್ಲಿ, ಬಿಜೆಪಿ ಕಲಿಯಗಂಜ್ ಮತ್ತು ಖರಗ್‌ಪುರ್ ಸದರ್ ವಿಧಾನಸಭಾ ಕ್ಷೇತ್ರಗಳನ್ನು ಭಾರಿ ಅಂತರದಿಂದ ಗೆದ್ದರೆ, ಕಲಿಯಗಂಜ್ ಮತ್ತು ಕರಿಮ್‌ಪುರದಲ್ಲಿ 2016 ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಪಕ್ಷವು ಹೆಚ್ಚಿನ ಮತಗಳನ್ನು ಗಳಿಸಿತು. ಆದರೂ ನಾವು ಮೂರು ಸ್ಥಾನಗಳಲ್ಲಿ ಸೋತಿದ್ದೇವೆ? ಟಿಎಂಸಿ ಮೊದಲ ಬಾರಿಗೆ ಖರಗ್ಪುರ್ ಸದರ್ ಸ್ಥಾನವನ್ನು ಗೆದ್ದಿದೆ. ಈ ಎಲ್ಲ ವಿಷಯಗಳು ಅನುಮಾನಗಳನ್ನು ಹುಟ್ಟುಹಾಕುತ್ತವೆ. ಎಲ್ಲೆಡೆ, ಮಾಧ್ಯಮದಿಂದ ಸಾರ್ವಜನಿಕರಿಗೆ, ಬಿಜೆಪಿ ಉಪಚುನಾವಣೆಗಳನ್ನು ಗೆಲ್ಲುತ್ತದೆ ಎಂದು ಹೇಳಲಾಗುತ್ತಿತ್ತು' ಎಂದು ಹೇಳಿದ್ದಾರೆ.