ಲಕ್ನೋ: 2019ರ ನಡೆದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಯಶಸ್ಸಿನ ಬಳಿಕ ಭಾರತೀಯ ಜನತಾ ಪಕ್ಷ ತನ್ನ ಸದಸ್ಯತ್ವ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಲು ನಿರ್ಧರಿಸಿದೆ. 


COMMERCIAL BREAK
SCROLL TO CONTINUE READING

ಈ ಬಾರಿ ಮುಸ್ಲಿಂ ಮಹಿಳೆಯರ ಸದಸ್ಯತ್ವಕ್ಕಾಗಿ ಹೆಚ್ಚು ಗಮನಹರಿಸಿರುವ ಬಿಜೆಪಿ ಹೊಸ ತಂತ್ರವನ್ನೇ ರೂಪಿಸಿದ್ದು, ನಿರ್ದಿಷ್ಟ ವಿಷಯಗಳನ್ನು ಮುಂದಿಟ್ಟುಕೊಂಡು ಅವರನ್ನು ತಲುಪುವ ಪ್ರಯತ್ನಕ್ಕೆ ಕೈ ಹಾಕಿದೆ. ಈ ಮೂಲಕ ಬಿಜೆಪಿ ಮಾತ್ರ ರಾಜ್ಯದ ಮುಸ್ಲಿಂ ಮಹಿಳೆಯರ ಹಿತಚಿಂತಕ ಎಂಬ ಭರವಸೆ ಮೂಡಿಸಲು ಯೋಜನೆ ರೂಪಿಸಿದೆ.


"ಈ ಬಗ್ಗೆ ಬಿಜೆಪಿ ಸಭೆ ನಡೆಸಿದ್ದು, ಮುಸ್ಲಿಮರನ್ನು ಬಿಜೆಪಿ ಎಂದಿಗೂ ಅಸ್ಪ್ರುಶ್ಯರು ಎಂದು ಭಾವಿಸಿಲ್ಲ. ಸಮಾಜದ ಎಲ್ಲಾ ಜನರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಲು ಬಯಸುತ್ತದೆ. ಹಾಗಾಗಿ ಮತ್ತಷ್ಟು ಮುಸ್ಲಿಂ ಮಹಿಳೆಯರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸದಸ್ಯತ್ವ ಅಭಿಯಾನವನ್ನು ಆರಂಭಿಸಲು ನಿರ್ಧರಿಸಲಾಗಿದೆ" ಎಂದು ಉತ್ತರ ಪ್ರದೇಶ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಮ್ದಾರ್ ಅಬ್ಬಾಸ್ ಚಂದ್ ಹೇಳಿದ್ದಾರೆ.


"ತ್ರಿವಳಿ ತಲಾಖ್ ವಿಚಾರವಾಗಿ ಬಿಜೆಪಿ ನಿರ್ಧಾರ ಮುಸ್ಲಿಂ ಮಹಿಳೆಯರನ್ನು ಪಕ್ಷದತ್ತ ಸೆಳೆದಿದೆ. ಇತರ ರಾಜ್ಯಗಳಲ್ಲಿಯೂ ಬಿಜೆಪಿ ಮುಸ್ಲಿಂ ಅಭ್ಯರ್ಥಿಗಳನ್ನೂ ಚುನಾವಣೆಯಲ್ಲಿ ಕಣಕ್ಕಿಳಿಸಿತ್ತು. ಹೀಗಾಗಿ ಈ ವರ್ಗಕ್ಕೆ ಪಕ್ಷದ ಬಗ್ಗೆ ಭರವಸೆ ಮೂಡಿದೆ. ಆದ್ದರಿಂದ, ಸದಸ್ಯತ್ವ ಅಭಿಯಾನದ ಸಮಯದಲ್ಲಿ ಅಲ್ಪಸಂಖ್ಯಾತರ ಮೇಲೆ, ವಿಶೇಷವಾಗಿ ಮುಸ್ಲಿಂ ಮಹಿಳೆಯರ ಬಗ್ಗೆ ಹೆಚ್ಚಿನ ಗಮನಹರಿಸಲು ನಾವು ಬಯಸುತ್ತೇವೆ. ಅದಕ್ಕಾಗಿ ಮನೆಮನೆಗೆ ಹೋಗಿ ಬಿಜೆಪಿ ಸರ್ಕಾರ ಯೋಜನೆಗಳ ಬಗ್ಗೆ ಅವರಿಗೆ ಅರಿವು ಮೂಡಿಸಲಾಗುವುದು" ಎಂದು ಚಾಂದ್ ಐಎಎನ್‌ಎಸ್‌ಗೆ ಹೇಳಿದ್ದಾರೆ.