ನವದೆಹಲಿ: ಬಿಜೆಪಿಯು 2014ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ಕಂಡ ನಂತರ  2015-16 ಮತ್ತು 2016-17ರ ನಡುವೆ ಪಕ್ಷದ ಆದಾಯವು ಗಣನೀಯವಾಗಿ ಏರಿಕೆ ಕಂಡಿದೆ. ಈ ಅವಧಿಯಲ್ಲಿ  ಬಿಜೆಪಿಯ ಆದಾಯವು ಶೇಕಡಾ 81.18 ರಷ್ಟು ಏರಿಕೆಯನ್ನು ಕಂಡಿದೆ. ಆದರೆ ಇದೇ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಆದಾಯವು ಶೇಕಡ 14 ರಷ್ಟು ಕುಸಿತ ಕಂಡಿದೆ.


COMMERCIAL BREAK
SCROLL TO CONTINUE READING

ದೇಶದಲ್ಲಿ ರಾಜಕೀಯ ಮತ್ತು ಚುನಾವಣಾ ಸುಧಾರಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಅಸೋಸಿಯೇಷನ್ ಫಾರ್ ಡೆಮೋಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆಯು ಈ ಕುರಿತಾಗಿ ವರದಿಯನ್ನು ಬಿಡುಗಡೆ ಮಾಡಿದೆ. ಇದರ ಅನ್ವಯ ಬಿಜೆಪಿಯು ಒಟ್ಟು 1,034.27 ಕೋಟಿ ರೂ. ಆದಾಯವನ್ನು ಚುನಾವಣಾ ಆಯೋಗಕ್ಕೆ ಘೋಷಿಸಿದೆ. ಇದು ಹಿಂದಿನ ಸಲ್ಲಿಕೆಯಿಂದ ರೂ 463.41 ಕೋಟಿಯಷ್ಟು ಏರಿಕೆಯಾಗಿದೆ. ಅದೇ ರೀತಿಯಾಗಿ ಬಿಜೆಪಿಯು 2016-17ರ ಅವಧಿಯಲ್ಲಿ 710.057 ಕೋಟಿ ರೂಪಾಯಿಗಳಷ್ಟು ಹಣವನ್ನು ಖರ್ಚು ಮಾಡಿದೆ ಎಂದು ಘೋಷಿಸಿದೆ.


ಇದೇ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವು 321.66 ಕೋಟಿ ರೂ. ಖರ್ಚು ಮಾಡಿದೆ. ಇದು ಈ ಅವಧಿಯಲ್ಲಿನ ಆದಾಯಕ್ಕಿಂತ  96.30 ಕೋಟಿ ರೂ ಹೆಚ್ಚು ಎಂದು ಹೇಳಲಾಗಿದೆ.ರಾಷ್ಟ್ರದ ಒಟ್ಟು ಏಳು ಪಕ್ಷಗಳ ಒಟ್ಟು ಆದಾಯವು 1,559.17  ಕೋಟಿ ರೂಗಳಾಗಿದ್ದು, ಜೊತೆಗೆ ಖರ್ಚು 1,228.26 ಕೋಟಿಯಷ್ಟು ಆಗಿದೆ ಎಂದು ವರದಿ ಮಾಡಿದೆ. ಇದರಲ್ಲಿ 1,169.07 ಕೋಟಿ ( ಶೇ.74.98 ರಷ್ಟು)ರೂಪಾಯಿ ಹಣವು ದಾನಿಗಳ ಮೂಲಕ ಹರಿದು ಬಂದಿದೆ ಎಂದು ಎಡಿಆರ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.