ಬಿಜೆಪಿ ರಥ ಯಾತ್ರಾ: ಮೊದಲು ರೈತರ ಸಮಸ್ಯೆ ಪರಿಹರಿಸಿ ಎಂದ ಶಿವಸೇನಾ
ಚುನಾವಣೆಯ ಹೊಸ್ತಿಲಲ್ಲಿ ಇಂತಹ ಯಾತ್ರೆಗಳು ನಡೆಯುತ್ತವೆ ಎಂದು ಶಿವಸೇನಾ ಹೇಳಿದೆ.
ಮುಂಬೈ: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರದ ಸಾಧನೆಗಳನ್ನು ಎತ್ತಿ ಹಿಡಿಯಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಆಯೋಜಿಸಲಿರುವ ರಥಯಾತ್ರಾ ಕುರಿತು ಶಿವಸೇನೆ ಪ್ರಶ್ನೆ ಎತ್ತಿದ್ದು, ರಾಜ್ಯಾದ್ಯಂತ ರೈತರು ಸಂಕಷ್ಟದಲ್ಲಿದ್ದಾರೆ, ಅವರ ಸಮಸ್ಯೆಗಳನ್ನು ಮೊದಲಿಗೆ ಬಗೆಹರಿಸಬೇಕು ಎಂದು ಶಿವಸೇನೆ ತನ್ನ ಮುಖವಾಣಿ ಸಾಮನಾದ ಸಂಪಾದಕೀಯದಲ್ಲಿ ಒತ್ತಾಯಿಸಿದೆ.
'ರೈತರು ಸಂಕಷ್ಟದಲ್ಲಿ ಬಳಲುತ್ತಿದ್ದಾರೆ, ಅವರ ಸಮಸ್ಯೆಗಳನ್ನು ನಿವಾರಿಸಬೇಕು ಎಂಬುದು ನಮ್ಮ ಬೇಡಿಕೆ. ರೈತರ ಸಾಲಮನ್ನಾ ಫಡ್ನವೀಸ್ ಸರ್ಕಾರದ 4 ವರ್ಷಗಳ ಅಧಿಕಾರಾವಧಿಯ ದೊಡ್ಡ ಘೋಷಣೆಯಾಗಿದೆ. ರಸ್ತೆಗೆ ಡಾಂಬಾರು ಸೇರಿದಂತೆ ಇತರ ಕೆಲಸಗಳು ಮುಂದುವರೆದಿದ್ದರೂ, ರೈತರ ಸಾಲ ಮನ್ನಾ ಘೋಷಣೆ ಪೂರ್ಣವಾಗಿಲ್ಲ. ಫಸಲ್ ಭೀಮಾ ಯೋಜನೆಯಲ್ಲಿ ಮೋಸವಾಗಿದೆ' ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.
"ಮರಾಠರಿಗೆ ಮೀಸಲಾತಿ ಬಗ್ಗೆ ಘೋಷಣೆ ಮಾಡಿರುವ ಹೊರತಾಗಿಯೂ ಮಹಾರಾಷ್ಟ್ರದ ಜನರಿಗೆ ಅದರಿಂದ ಸಿಕ್ಕ ಪ್ರಯೋಜನವೇನು ಎಂಬ ಪ್ರಶ್ನೆಯನ್ನು ಬಿಜೆಪಿ ಸಂಸದ ಸಂಭಾಜಿ ಛತ್ರಪತಿ ಅವರು ಎತ್ತಿದ್ದಾರೆ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ."
ರಥಯಾತ್ರೆ ಆಯೋಜಿಸುವ ಮೊದಲು ಕೃಷಿ ಸಾಲ ಮನ್ನಾ, ಮರಾಠಾ ಮೀಸಲಾತಿ ಮುಂತಾದ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ. "ರಥಯಾತ್ರೆ ಮಹಾರಾಷ್ಟ್ರದಲ್ಲಿ ಅಭಿವೃದ್ಧಿಯ ಹಾದಿಯನ್ನು ಅನುಸರಿಸಬೇಕಾಗುತ್ತದೆ" ಎಂದು ಬಿಜೆಪಿ ಮಿತ್ರಪಕ್ಷ ಅಭಿಪ್ರಾಯಪಟ್ಟಿದೆ.