BSNL ನೌಕರರಿಗೆ ಸಿಹಿ ಸುದ್ದಿ; ಇಂದು ಸಿಗಲಿದೆ ಸಂಬಳ!
ಮುಂಬರುವ ತಿಂಗಳುಗಳಲ್ಲಿ ನೌಕರರಿಗೆ ವೇತನ ಪಾವತಿಯಲ್ಲಿ ವಿಳಂಬವಾಗುವುದಿಲ್ಲ ಎಂದು ಶ್ರೀವಾತ್ಸವ್ ತಿಳಿಸಿದ್ದಾರೆ.
ನವದೆಹಲಿ: ಸಾರ್ವಜನಿಕ ವಲಯದ ಟೆಲಿಕಾಂ ಕಂಪೆನಿ ಬಿಎಸ್ಎನ್ಎಲ್ ತನ್ನ ನೌಕರರ ಫೆಬ್ರವರಿ ತಿಂಗಳ ವೇತನವನ್ನು ಇಂದು(ಮಾರ್ಚ್ 15) ಪಾವತಿಸಲಿದೆ.
ಈ ಬಗ್ಗೆ ಗುರುವಾರ ಮಾಹಿತಿ ನೀಡಿರುವ ಕಂಪೆನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರೀವಾಸ್ತವ್, ಬಿಎಸ್ಎನ್ಎಲ್ ತನ್ನ ನೌಕರರ ವೇತನವನ್ನು ಶುಕ್ರವಾರ ಪಾವತಿಸಲಿದೆ ಎಂದರಲ್ಲದೆ, ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಅವರು ಮಧ್ಯಪ್ರವೇಶಿಸಿ ಉದ್ಯೋಗಿಗಳಿಗೆ ಶೀಘ್ರವಾಗಿ ವೇತನ ಪಾವತಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಿಂದಾಗಿ ಉದ್ಯೋಗಿಗಳಿಗೆ ಶೀಘ್ರದಲ್ಲಿಯೇ ವೇತನ ಪಾವತಿಯಾಗಲಿದೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ, ಮಾರ್ಚ್ ತಿಂಗಳಿನಲ್ಲಿ ಬಿಎಸ್ಎನ್ಎಲ್ ಆದಾಯದ ಅಧಿಕವಾಗಿದ್ದು, ಆತಂರಿಕ ಸಂಪನ್ಮೂಲಗಳ ಹರಿವು ಹೆಚ್ಚಾಗಿದೆ. ಮಾರ್ಚ್ ತಿಂಗಳಲ್ಲಿ ಒಟ್ಟು 2,700 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಇದರಲ್ಲಿ ಉದ್ಯೋಗಿಗಳ ವೇತನವನ್ನು ಪಾವತಿಸಲು 850 ಕೋಟಿ ರೂ. ವೆಚ್ಚವಾಗಲಿದೆ ಎಂದು ತಿಳಿಸಿದ ಶ್ರೀವಾತ್ಸವ ಅವರು, ರಿಲಯನ್ಸ್ ಜಿಯೋ ಹೊರತುಪಡಿಸಿ, ಅಧಿಕ ಚಂದಾದಾರರನ್ನು ಹೊಂದಿರುವ ಏಕಮಾತ್ರ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್, ಹಾಗಾಗಿ ಕಂಪನಿಯ ಆದಾಯ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.
ಉದ್ಯೋಗಿಗಳಿಗೆ ವೇತನ ಪಾವತಿ ವಿಚಾರವಾಗಿ ಸುರಸಂಪರ್ಕ ಸಚಿವರು ಕ್ರಮ ಕೈಗೊಂಡಿದ್ದು, ಎಲ್ಲಾ ಬಿಕ್ಕಟ್ಟನ್ನೂ ಮೇಲ್ವಿಚಾರಣೆ ನಡೆಸಿ ಬಗೆಹರಿಸಿದ್ದಾರೆ. ಹೀಗಾಗಿ ಮುಂಬರುವ ತಿಂಗಳುಗಳಲ್ಲಿ ನೌಕರರಿಗೆ ವೇತನ ಪಾವತಿಯಲ್ಲಿ ವಿಳಂಬವಾಗುವುದಿಲ್ಲ ಎಂದು ಶ್ರೀವಾತ್ಸವ್ ತಿಳಿಸಿದ್ದಾರೆ.