ಅರಣ್ಯದಲ್ಲಿ ಧ್ಯಾನ ಮಾಡಲು ಹೋಗಿ ಚಿರತೆಗೆ ಆಹಾರವಾದ ಬೌದ್ಧ ಸನ್ಯಾಸಿ!
ಮಂಗಳವಾರ ಮುಂಜಾನೆ ರಾಮ್‌ದೇಗಿ ಅರಣ್ಯದಲ್ಲಿ ಮರದ ಕೆಳಗೆ ಕುಳಿತು ಧ್ಯಾನ ಮಾಡುತ್ತಿದ್ದ ಬೌದ್ಧ ಸನ್ಯಾಸಿಯ ಮೇಲೆರಗಿದ ಚಿರತೆಯೊಂದು ಅವರನ್ನು ಎಳೆದುಕೊಂಡು ಹೋಗಿ ದಾಳಿ ನಡೆಸಿ ಕೊಂದು ಹಾಕಿದೆ.
ನವದೆಹಲಿ: ಸಂರಕ್ಷಿತ ಅರಣ್ಯದಲ್ಲಿ ಧ್ಯಾನ ಮಾಡಲು ಹೋದ ಬೌದ್ಧ ಸನ್ಯಾಸಿಯೊಬ್ಬರು ಚಿರತೆಗೆ ಆಹಾರವಾದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ರಾಮ್‌ದೇಗಿ ಅರಣ್ಯದಲ್ಲಿ ನಡೆದಿದೆ.
ಮಂಗಳವಾರ ಮುಂಜಾನೆ ರಾಮ್‌ದೇಗಿ ಅರಣ್ಯದಲ್ಲಿ ಮರದ ಕೆಳಗೆ ಕುಳಿತು ಧ್ಯಾನ ಮಾಡುತ್ತಿದ್ದ ಬೌದ್ಧ ಸನ್ಯಾಸಿಯ ಮೇಲೆರಗಿದ ಚಿರತೆಯೊಂದು ಅವರನ್ನು ಎಳೆದುಕೊಂಡು ಹೋಗಿ ದಾಳಿ ನಡೆಸಿ ಕೊಂದು ಹಾಕಿದೆ. ಮೃತ ಸನ್ಯಾಸಿಯನ್ನು ರಾಹುಲ್ ವಾಲ್ಕೆ ಬೋಧಿ (35) ಎಂದು ಗುರುತಿಸಲಾಗಿದೆ.
ಬೌದ್ಧ ಸನ್ಯಾಸಿಯ ಜೊತೆಗೆ ಇಬ್ಬರು ಭಕ್ತರೂ ಕುಳಿತುಕೊಂಡು ಮರದ ಕೆಳಗೆ ಧ್ಯಾನ ಮಾಡುತ್ತಿದ್ದರು. ಸನ್ಯಾಸಿಯ ಮೇಲೆ ಚಿರತೆ ದಾಳಿ ಮಾಡಿ ಅವರನ್ನು ಎಳೆದುಕೊಂಡು ಹೋಗುತ್ತಿದ್ದಂತೆ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಳಿಕ, ಪೊಲೀಸರ ಜೊತೆಗೂಡಿ ಸನ್ಯಾಸಿಯ ದೇಹದ ಹುಡುಕಾಟ ನಡೆಸಿದ್ದಾರೆ. ಚಿರತೆಯ ದಾಳಿಯಿಂದ ರಕ್ತಸಿಕ್ತವಾಗಿದ್ದ ಸನ್ಯಾಸಿಯ ದೇಹ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ಕೃಷ್ಣ ತಿವಾರಿ ತಿಳಿಸಿದ್ದಾರೆ.