ಸಿರ್ಸಾ (ಹರಿಯಾಣ): ಸಾಮಾನ್ಯವಾಗಿ ನಾವು ತರಕಾರಿ, ಕೆಲವೊಮ್ಮೆ ಉಳಿದ ಆಹಾರವನ್ನು ಮನೆ ಮುಂದೆ ಬರುವ ಹಸುವಿಗೆ ಹಾಕುತ್ತೇವೆ. ಆದರಿಲ್ಲಿ ಗೂಳಿಗೆ ತರಕಾರಿ ಜೊತೆಗೆ ಚಿನ್ನವನ್ನೂ ಹಾಕಿದ ಘಟನೆ ನಡೆದಿದೆ. ಇಲ್ಲಿನ ಕಲನವಾಲಿ ಪ್ರದೇಶದ ಆರನೇ ವಾರ್ಡ್‌ನಲ್ಲಿ ವಾಸಿಸುತ್ತಿರುವ ಮಹಿಳೆಗೆ ಸೇರಿದ ಸುಮಾರು 40 ಗ್ರಾಂ ಚಿನ್ನದ ಆಭರಣಗಳನ್ನು ಗೂಳಿನುಂಗಿದೆ ಎಂದು ಹೇಳಲಾಗುತ್ತಿದೆ.  ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ಮಾಧ್ಯಮಗಳೊಂದಿಗೆ ಮಾತನಾಡಿದ ಜನಕರಾಜ್, "ಅಕ್ಟೋಬರ್ 19 ರಂದು ನನ್ನ ಹೆಂಡತಿ ಮತ್ತು ಸೊಸೆ ತಮ್ಮ ಚಿನ್ನದ ಆಭರಣಗಳನ್ನು ತರಕಾರಿಗಳನ್ನು ಕತ್ತರಿಸುವ ಬಟ್ಟಲಿನಲ್ಲಿ ಹಾಕಿದ್ದರಿಂದ ಈ ಘಟನೆ ನಡೆದಿದೆ. ಅಕಸ್ಮಾತ್ ಆಗಿ ತರಕಾರಿ ಸಿಪ್ಪೆಯನ್ನು ಚಿನ್ನದ ಆಭರಣಗಳನ್ನು ಇಟ್ಟಿದ್ದ ಬಟ್ಟಲಿನ ಪಕ್ಕದಲ್ಲಿ ಹಾಕಲಾಗಿದೆ. ಆದರೆ ತರಕಾರಿ ಸಿಪ್ಪೆ ಅಧಿಕವಾಗಿದ್ದರಿಂದ ಆಭರಣಗಳನ್ನು ಇಟ್ಟಿದ್ದೂ ಗೊತ್ತಾಗಲಿಲ್ಲ. ಮರೆತು ಸಿಪ್ಪೆಯೊಂದಿಗೆ ಆಭರಣವನ್ನೂ ಕಸಕ್ಕೆ ಹಾಕಲಾಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡ ತುಣುಕಿನಲ್ಲಿ ಕಸದಲ್ಲಿ ತರಕಾರಿ ಜೊತೆಗೆ ಗೂಳಿ ಚಿನ್ನವನ್ನೂ ತಿಂದಿರುವುದು ತಿಳಿಯಿತು" ಎಂದು ವಿವರಿಸಿದರು.


"ಘಟನೆ ಬಗ್ಗೆ ತಿಳಿದ ಬಳಿಕ ನಾವು ಪ್ರಾಣಿಗಳನ್ನು ಹಿಡಿಯಲು ಪಶುವೈದ್ಯರನ್ನು ಕರೆದು ಗೂಳಿಯನ್ನು ಹುಡುಕಿದೆವು. ಇದರ ನಂತರ, ನಾವು ಆ ಗೂಳಿಯನ್ನು ನಮ್ಮ ಮನೆಯ ಸಮೀಪ ತೆರೆದ ಜಾಗದಲ್ಲಿ ಕಟ್ಟಿಹಾಕಿ ಅದನ್ನು ಪೋಷಿಸುತ್ತಿದ್ದೇವೆ. ಗೂಳಿ ಸಗಣಿ ಹಾಕಿದಾಗ ನಮ್ಮ ಚಿನ್ನ ನಮಗೆ ದೊರೆಯಲಿದೆ ಎಂಬ ನಿರೀಕ್ಷೆ ನಮ್ಮದು. ಅದಕ್ಕಾಗಿ ನಾವು ಅದನ್ನು ಪೋಷಿಸುತ್ತಿದ್ದೇವೆ" ಎಂದು ಅವರು ಹೇಳಿದರು.


"ಒಂದೊಮ್ಮೆ ನಾವು ಗೂಳಿಯ ಸಗಣಿಯಿಂದ ಚಿನ್ನವನ್ನು ಪಡೆಯದಿದ್ದರೆ ಬಳಿಕ ಅದನ್ನು ಗೋಶಾಲೆಯಲ್ಲಿ ಬಿಡುತ್ತೇವೆ" ಎಂದು ಜನಕರಾಜ್ ಹೇಳಿದರು.