ಪ್ರಯಾಗ್ ರಾಜ್: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರೆದಿವೆ. ನಂಬಲರ್ಹವಾದ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಉತ್ತರ ಪ್ರದೇಶದಲ್ಲಿ ಇದುವರೆಗೆ ನಡೆದಿರುವ ಹಿಂಸಾತ್ಮಕ ಪ್ರತಿಭಟನೆಯಲ್ಲಿ 11 ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪ್ರಯಾಗ್ ರಾಜ್ ನಲ್ಲಿ ಪ್ರತಿಭಟನೆಗಿಳಿದ ಹಾಗೂ 144 ಉಲ್ಲಂಘಿಸಿದ ಸುಮಾರು 100 ಜನ ಖ್ಯಾತನಾಮರು ಸೇರಿದಂತೆ ಒಟ್ಟು 10,000 ಜನರ ಮೇಲೆ FIR ದಾಖಲಿಸಲಾಗಿದೆ. ಪ್ರಯಾಗ್ ರಾಜ್ ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಈ ಪ್ರಕರಣಗಳನ್ನು ದಾಖಲಿಸಲಾಗಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ ಈ ಪ್ರಕರಣದಲ್ಲಿ ಇದುವರೆಗೆ 150ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಅತ್ತ ಗೋರಕ್ ಪುರ್ ನಲ್ಲಿ ಕಲ್ಲುತೂರಾಟಕ್ಕೆ ಇಳಿದ ಕಿಡಿಗೇಡಿಗಳನ್ನು ಪೊಲೀಸರು ಗುರುತಿಸಿದ್ದು, ಈ ಕಿಡಿಗೇಡಿಗಳ ಭಾವಚಿತ್ರಗಳನ್ನು ವೈರಲ್ ಸಾಮಾಜಿಕ ಮಾಧ್ಯಮಗಳ ಮೇಲೆ ಬಿಡುಗಡೆಗೊಳಿಸಿದ್ದಾರೆ. ಅಷ್ಟೇ ಅಲ್ಲ ಸಾರ್ವಜನಿಕರಿಗೆ ಈ ಬಗ್ಗೆ  ಮನವಿ ಮಾಡಿರುವ  ಪೊಲೀಸರು, ಈ ಕಿಡಿಗೇಡಿಗಳನ್ನು ಹಾಗೂ ಕಲ್ಲುತೂರಾಟಗಾರರನ್ನುಗುರುತಿಸಿ ಎಂದು ಕೋರಿದ್ದಾರೆ. ಜೊತೆಗೆ ಈ ಕಿಡಿಗೇಡಿಗಳ ಪತ್ತೆ ಹಚ್ಚುವವರ ಹೆಸರನ್ನೂ ಸಹ ಗೌಪ್ಯವಾಗಿ ಇಡಲಾಗುವುದು ಎಂದು ಪೊಲೀಸರು ಹೇಳಿದ್ದು, ಗುರುತು ಪತ್ತೆ ಹಚ್ಚುವವರಿಗೆ ವಿಶೇಷ ಬಹುಮಾನ ಕೂಡ ನೀಡಲಾಗುವುದು ಎಂದು ಘೋಶಿಸಿದ್ದಾರೆ.


ಇನ್ನೊಂದೆಡೆ ಪ್ರದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಯೋಗಿ ಆದಿತ್ಯನಾಥ್ ರಾಜ್ಯದ ಪೊಲೀಸ್ DGP ಓ.ಪಿ ಸಿಂಗ್ ಅವರಿಗೆ ಬುಲಾವ್ ಕಳುಹಿಸಿದ್ದಾರೆ. ಈ ವೇಳೆ ಸಿಎಂ ಭೇಟಿಗೆ ತುರ್ತು ಧಾವಿಸಿರುವ DGP ಓ.ಪಿ. ಸಿಂಗ್ ಅವರ ಜೊತೆ 20 ನಿಮಿಷಗಳ ಕಾಲ ಸಮಾಲೋಚನೆ ನಡೆಸಿ, ಹಿಂಸೆಯ ಸಿಎಂಗೆ ಅಪ್ಡೇಟ್ ನೀಡಿದ್ದಾರೆ. ಈ ಮಾತುಕತೆಯ ವೇಳೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಟ್ಟುನಿಟ್ಟಿನಿಂದ ಪಾಲಿಸುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ಸಿಎಂ ಯೋಗಿ ನಿರ್ದೇಶನ ನೀಡಿದ್ದಾರೆ. ತಮ್ಮ ಈ ಭೇಟಿಯ ಬಳಿಕ ರಾಜ್ಯಪಾಲರ ಬಳಿ ಧಾವಿಸಿರುವ ಸಿಎಂ ಯೋಗಿ ಆಧಿತ್ಯನಾಥ್, ರಾಜ್ಯದ ರಾಜ್ಯಪಾಲೆಯಾಗಿರುವ ಆನಂದಿಬೆನ್ ಪಟೇಲ್ ಅವರ ಜೊತೆ ಸುದೀರ್ಘ ಚರ್ಚೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.