ಕಾವೇರಿ ವಿವಾದ: ಇಂದು ತಮಿಳು ನಾಡು ಬಂದ್
ರಾಜ್ಯದಿಂದ ತಮಿಳುನಾಡಿಗೆ ತೆರಳುವ ಬಸ್ ಸಂಚಾರ ಸ್ಥಗಿತ.
ಚೆನ್ನೈ: ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆಗ್ರಹಿಸಿ ಇಂದು ತಮಿಳುನಾಡು ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಇಂದು ಬೆಳಿಗ್ಗೆಯಿಂದಲೇ ತಮಿಳುನಾಡಿಗೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದೆ.
ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿ ತಮಿಳುನಾಡು ಬಂದ್ ಗೆ ಕರೆ ನೀಡಲಾಗಿದ್ದು, ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ರಾಜಕೀಯ ಪಕ್ಷಗಳು, ವ್ಯಾಪಾರಿಗಳು, ವಿದ್ಯಾರ್ಥಿಗಳು, ಯುವ ಸಂಘಟನೆಗಳು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಉಪಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಉಪವಾಸ ಸತ್ಯಾಗ್ರಹವನ್ನೂ ನಡೆಸುತ್ತಿದ್ದಾರೆ.
ಇನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಅಡಿಯಾಳಾಗಿ ವರ್ತಿಸುತ್ತಿದೆ ಎಂದು ಮಕ್ಕಳ್ ನೀತಿ ಮಯ್ಯಂ ಪಕ್ಷದ ನಾಯಕ ಕಮಲ್ ಹಾಸನ್ ಕಿಡಿಕಾರಿದ್ದರೆ, ಎಐಎಡಿಎಂಕೆ ನಾಯಕರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಕೇವಲ ನಾಟಕ ಎಂದು ಡಿಎಂಕೆ ಹರಿಹೈದಿದ್ದಾರೆ.