ನವದೆಹಲಿ: ಮಂಗಳವಾರ ದೆಹಲಿಯ ಕೇಂದ್ರ ಜಲ ಆಯೋಗದ ಕಚೇರಿಯಲ್ಲಿ ಮಹತ್ವದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೇನ್ ನೇತೃತ್ವದಲ್ಲಿ ಬೆಳಿಗ್ಗೆ 10.30ಕ್ಕೆ‌ ಪ್ರಾಧಿಕಾರದ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.


COMMERCIAL BREAK
SCROLL TO CONTINUE READING

ಮಂಗಳವಾರದ ಸಭೆಯಲ್ಲಿ ತಮಿಳುನಾಡು ಮತ್ತೊಮ್ಮೆ ಕರ್ನಾಟಕ ಬಿಡಬೇಕಿರುವ ನೀರಿಗಾಗಿ ಬೇಡಿಕೆ ಇಡಲಿದೆ. ಜೂನ್ ತಿಂಗಳಿನಲ್ಲಿ ಕರ್ನಾಟಕವು ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡಬೇಕಿತ್ತು. ಆದರೆ ಬಿಳಿಗುಂಡ್ಲು ಮೂಲಕ ಕೇವಲ 1.72 ಟಿಎಂಸಿ ನೀರು ಬಿಟ್ಟಿದೆ. ಬಾಕಿ 7.47 ಟಿಎಂಸಿ ನೀರು ಬಿಡಲು ಕರ್ನಾಟಕಕ್ಕೆ ಸೂಚನೆ ನೀಡಿ ಎಂದು ತಮಿಳುನಾಡು ಪ್ರಾಧಿಕಾರದ ಮುಂದೆ ಮನವಿ ಮಾಡಲಿದೆ.


ರಾಜ್ಯದಲ್ಲೇ ಬೆಳೆಗಳಿಗೆ ಮತ್ತು ಕುಡಿಯಲು ನೀರಿಲ್ಲ:
ತಮಿಳುನಾಡು ಹೀಗೆ ನೀರಿಗಾಗಿ ಬೇಡಿಕೆ ಇಡುತ್ತೆ ಎಂದು ಮನಗೊಂಡಿರುವ ಕರ್ನಾಟಕ, ಕಾವೇರಿ‌ ಕೊಳ್ಳದಲ್ಲಿ ವಾಡಿಕೆಯಷ್ಟು ಮಳೆ ಆಗಿಲ್ಲ.‌ ಮಳೆ ಆಗಿಲ್ಲದಿರುವುದರಿಂದ ಜಲಾಶಯಗಳಲ್ಲಿ ನೀರಿಲ್ಲ. ರಾಜ್ಯದಲ್ಲೇ ಬೆಳೆಗಳಿಗೆ ಮತ್ತು ಕುಡಿಯಲು ನೀರಿಲ್ಲ. ನೀರಿಲ್ಲದೇ ಇರುವುದರಿಂದ ನೀರು ಬಿಡಲು ಸಾಧ್ಯವಿಲ್ಲ. ಮುಂದೆ ಮಳೆ ಚೆನ್ನಾಗಿ ಬಂದರಷ್ಟೇ ನೀರು ಬಿಡಲಾಗುವುದು ಎಂದು ಹೇಳಲಿದೆ. ಎರಡೂ ವಾದಗಳನ್ನು ಆಲಿಸಿ ಪ್ರಾಧಿಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕು.