ಅಮರ್ತ್ಯ ಸೇನ್ ಸಾಕ್ಷ್ಯಚಿತ್ರಕ್ಕೆ ಒಪ್ಪಿಗೆ ಸೂಚಿಸಿದ ಸಿಬಿಎಫ್ಸಿ
ಕೊಲ್ಕತ್ತಾ: ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರ ಸಂಪೂರ್ಣ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್ಸಿ) ಸಮ್ಮತಿ ಸೂಚಿಸಿದೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸುಮನ್ ಘೋಶ್ ತಿಳಿಸಿದ್ದಾರೆ.
ಕೋಲ್ಕತ್ತಾ ಸಿಬಿಎಫ್ಸಿ ನಿರ್ದೇಶಕ ನೇತೃತ್ವದಲ್ಲಿ -ಹಸು, ಗುಜರಾತ್, ಹಿಂದುತ್ವ ಮತ್ತು ಹಿಂದೂ ಪದಗಳನ್ನು ತೆಗೆದು ಹಾಕಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಕಳೆದ ವರ್ಷ ಈ ಸಾಕ್ಷ್ಯಚಿತ್ರವು ವಿವಾದಕ್ಕೆ ಒಳಗಾಗಿತ್ತು . ಸಿಬಿಎಫ್ಸಿ ಚೇರ್ಮನ್ ಪ್ರಸಾನ್ ಜೋಷಿ ಮುಂಬೈಯಲ್ಲಿ 'ದಿ ಆರ್ಗ್ಯುಮೆಂಟೇಟಿವ್ ಇಂಡಿಯನ್' ಸಾಕ್ಷ್ಯಚಿತ್ರವನ್ನು ಮಂಡಳಿಯ ಸದಸ್ಯರೊಂದಿಗೆ ವೀಕ್ಷಿಸಿದ ನಂತರ ಒಪ್ಪಿಗೆಯನ್ನು ನೀಡಿದ್ದಾರೆ. ನಿನ್ನೆ ಚಿತ್ರ ನೋಡಿದ ನಂತರ, ಪ್ರಸನ್ ಜೋಶಿ ಅವರು ನನ್ನೊಂದಿಗೆ ಚರ್ಚೆ ನಡೆಸಿ ಚಿತ್ರದ ಬಿಡುಗಡೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಘೋಷ್ ಪಿಟಿಐಗೆ ತಿಳಿಸಿದ್ದಾರೆ.
2002 ಮತ್ತು 2017 ರಲ್ಲಿ ಎರಡು ಭಾಗಗಳಲ್ಲಿ ಚಿತ್ರೀಕರಿಸಿದ ಈ ಚಿತ್ರ, ಸಾಮಾಜಿಕ ಆಯ್ಕೆಯ ಸಿದ್ಧಾಂತ, ಅಭಿವೃದ್ಧಿ ಅರ್ಥಶಾಸ್ತ್ರ, ತತ್ತ್ವಶಾಸ್ತ್ರ ಮತ್ತು ಭಾರತ ಸೇರಿದಂತೆ ಜಗತ್ತಿನಾದ್ಯಂತ ಬಲಪಂಥೀಯ ರಾಷ್ಟ್ರೀಯತೆಯ ಉದಯದ ಕುರಿತಾಗಿ ಅಮರ್ತ್ಯಸೇನ್ ಮಾತನಾಡಿರುವ ಭಾಷಣಗಳನ್ನು ಈ ಚಿತ್ರ ಒಳಗೊಂಡಿದೆ.