ಸೊಹ್ರಾಬುದ್ದೀನ್ ಶೇಖ್ ಪ್ರಕರಣ ವಿಚಾರಣೆ ಆರಂಭಕ್ಕೆ ಮುಂದಾದ ಸಿಬಿಐ ನ್ಯಾಯಾಲಯ
ಸೋಹ್ರಾಬುದ್ದೀನ್ ಶೇಖ್ ಮತ್ತು ತುಳಸಿ ಪ್ರಜಾಪತಿ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಮುಂಬೈಯ ವಿಶೇಷ ಸಿಬಿಐ ನ್ಯಾಯಾಲಯವು ವಿಚಾರಣೆಯನ್ನು ಆರಂಭಿಸಲು ಸಿದ್ಧವಾಗಿದೆ.
ಮುಂಬೈ: ಸೋಹ್ರಾಬುದ್ದೀನ್ ಶೇಖ್ ಮತ್ತು ತುಳಸಿ ಪ್ರಜಾಪತಿ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಮುಂಬೈಯ ವಿಶೇಷ ಸಿಬಿಐ ನ್ಯಾಯಾಲಯವು ವಿಚಾರಣೆಯನ್ನು ಆರಂಭಿಸಲು ಸಿದ್ಧವಾಗಿದೆ.
ಕೊಲೆ, ಅಪಹರಣ ಮತ್ತು ಸಾಕ್ಷಿಗಳ ನಾಶಕ್ಕೆ ಸಂಬಂಧಿಸಿದಂತೆ 22 ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿದೆ. ಸೊಹ್ರಾಬುದ್ದೀನ್ ಅವರ ಸಹೋದರ ನಯಿಮುದ್ದೀನ್ ಸೇರಿದಂತೆ ಸುಮಾರು 20 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಬಹುದೆಂದು ನಿರೀಕ್ಷಿಸಲಾಗಿದೆ.
ಸೊಹ್ರಾಬುದ್ದೀನ್ ಸಹೋದರ ನಯಮುದ್ದೀನ್ ಮತ್ತು ಇನ್ನಿತರರಿಗೆ ನ್ಯಾಯಾಲಯವು ಈಗಾಗಲೇ ಸಮನ್ಸ್ ಜಾರಿ ಮಾಡಿದ್ದು, ಸಾಕ್ಷಿಗಳ ರೆಕಾರ್ಡಿಂಗ್ ನವೆಂಬರ್ 29 ರಿಂದ ಆರಂಭವಾಗಲಿದೆ ಎಂದು ವಿಶೇಷ ಸಿಬಿಐ ಪ್ರಾಸಿಕ್ಯೂಟರ್ ಬಿ.ಪಿ.ರಾಜು ತಿಳಿಸಿದ್ದಾರೆ.
ನವೆಂಬರ್ 2005 ರಲ್ಲಿ, ಗ್ಯಾಂಗ್ಸ್ಟರ್ ಸೊಹ್ರಾಬುದ್ದೀನ್ ಶೇಖ್ ಮತ್ತು ಅವರ ಪತ್ನಿ ಕೌಸರ್ ಬೈ ಅವರನ್ನು ಗುಜರಾತ್ ಭಯೋತ್ಪಾದನ ನಿಗ್ರಹ ದಳ(ಎಟಿಎಸ್) ಅಪಹರಿಸಿ, ಹೈದರಾಬಾದ್ನಿಂದ ಮಹಾರಾಷ್ಟ್ರದ ಸಾಂಗ್ಲಿಗೆ ಕರೆದೊಯ್ದು ಗಾಂಧಿನಗರ ಬಳಿ ನಕಲಿ ಎನ್ಕೌಂಟರ್ನಲ್ಲಿ ಕೊಲ್ಲಲಾಗಿತ್ತು ಎಂದು ಕೇಂದ್ರೀಯ ತನಿಖಾ ಸಂಸ್ಥೆ ಅಥವಾ ಸಿಬಿಐ ಹೇಳಿದೆ.
ಶೇಖ್ ಅವರ ಸಹಾಯಕ ಹಾಗೂ ಎನ್ಕೌಂಟರ್ಗೆ ಪ್ರತ್ಯಕ್ಷದರ್ಶಿಯಾಗಿದ್ದ ಪ್ರಜಾಪತಿಯನ್ನೂ ಕೂಡ ಗುಜರಾತಿನ ಬನಸ್ಕಾಂತ ಜಿಲ್ಲೆಯ ಚಾಪ್ರಿ ಹಳ್ಳಿಯಲ್ಲಿ 2006 ರ ಡಿಸೆಂಬರ್ನಲ್ಲಿ ಪೊಲೀಸರು ಕೊಂದಿದ್ದರು.
ಇದಕ್ಕೆ ಸಂಬಂಧಿಸಿದಂತೆ, 2013 ರಲ್ಲಿ ಬಿಜೆಪಿ ಮುಖ್ಯಸ್ಥ ಅಮಿತ್ ಷಾ ಮತ್ತು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಂತೆ ಇತರ 18 ಜನರ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿತ್ತು. ಆದರೆ ನಂತರ ಆಮಿತ್ ಷಾ ಗೆ ಸಿಬಿಐ ನ್ಯಾಯಾಲಯ ಕ್ಲೀನ್ ಚಿಟ್ ನೀಡಿತು.
ಸೆಪ್ಟೆಂಬರ್ 2012 ರಲ್ಲಿ ಸಿಬಿಐ ಕೋರಿಕೆಯ ಮೇರೆಗೆ ನಕಲಿ ಎನ್ಕೌಂಟರ್ ಪ್ರಕರಣದ ನ್ಯಾಯಯುತ ವಿಚಾರಣೆಗಾಗಿ ಅದನ್ನು ಮುಂಬೈ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು.ನಂತರ 2013 ರಲ್ಲಿ, ಸುಪ್ರೀಂಕೋರ್ಟ್ ಶೇಖ್ ಮತ್ತು ಪ್ರಜಾಪತಿ ಎನ್ಕೌಂಟರ್ ಪ್ರಕರಣಗಳನ್ನು ಸಂಯೋಜಿಸಿತು.
ಈ ವರ್ಷದ ಆರಂಭದಲ್ಲಿ, ಮಾಜಿ ಗುಜರಾತ್ ಇಂಡಿಯನ್ ಪೋಲಿಸ್ ಸರ್ವಿಸ್ (ಐಪಿಎಸ್) ಅಧಿಕಾರಿಗಳಾದ ಡಿ.ಜಿ.ವಾನ್ಝಾರ ಮತ್ತು ದಿನೇಶ್ ಎಂ.ಎನ್. ಅವರನ್ನು ಸಿಬಿಐ ನ್ಯಾಯಾಲಯ ಬಿಡುಗಡೆಗೊಳಿಸಿದೆ.