16 ಲಕ್ಷ ರೂ. ಲಂಚದ ಹಣದೊಂದಿಗೆ ಗೃಹ ಸಚಿವಾಲಯದ ಅಧಿಕಾರಿ ಸಿಬಿಐ ವಶಕ್ಕೆ
ಬಂಧಿತ ಅಧಿಕಾರಿ ಧೀರಜ್ ಕುಮಾರ್ ಸಿಬಿಐ ಅಧಿಕಾರಿಗೆ ಲಂಚ ನೀಡಲು ಮುಂದಾಗಿದ್ದ ಎಂದು ಹೇಳಲಾಗಿದೆ.
ನವದೆಹಲಿ: ಗೃಹ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಷನ್ ಅಧಿಕಾರಿಯನ್ನು 16 ಲಕ್ಷ ರೂ. ಲಂಚದ ಹಣದೊಂದಿಗೆ ಕೇಂದ್ರ ತನಿಖಾ ದಳ (ಸಿಬಿಐ) ಗುರುವಾರ ಬಂಧಿಸಿದೆ. ಬಂಧಿತ ಅಧಿಕಾರಿ ಧೀರಜ್ ಕುಮಾರ್ ಸಿಬಿಐ ಅಧಿಕಾರಿಗೆ ಲಂಚ ನೀಡಲು ಮುಂದಾಗಿದ್ದ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ, ಸಿಬಿಐ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಯ ವಿರುದ್ಧ ತನಿಖೆಯನ್ನು ಪ್ರಾರಂಭಿಸಿತ್ತು. ಧೀರಜ್ ಕುಮಾರ್ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಲು ಐಪಿಎಸ್ ಅಧಿಕಾರಿ 2 ಕೋಟಿ ರೂ. ಲಂಚದ ಆಮಿಷ ಒಡ್ಡಿದ್ದರು ಎನ್ನಲಾಗಿದೆ.
ಸಂಬಂಧಪಟ್ಟ ಸಿಬಿಐ ಅಧಿಕಾರಿ ತನ್ನ ಹಿರಿಯ ಅಧಿಕಾರಿಗೆ 2 ಕೋಟಿ ರೂ.ಗಳ ಲಂಚದ ಬಗ್ಗೆ ಮಾಹಿತಿ ನೀಡಿದ್ದು, ನಂತರ ಕುಮಾರ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಬಲೆ ಹಾಕಿದರು. ಸಿಬಿಐ ಅಧಿಕಾರಿಗಳಿಗೆ ಮುಂಗಡ ಹಣವಾಗಿ 16 ಲಕ್ಷ ರೂ. ನೀಡಲು ಬಂದ ಅಧಿಕಾರಿಯನ್ನು ಸಾಕ್ಷ್ಯ ಸಮೇತ ಬಂಧಿಸಲಾಯಿತು ಎಂದು ಮೂಲಗಳು ತಿಳಿಸಿವೆ.