ಲಕ್ನೋ: ಉದ್ಯಮಿ ಮೋಹಿತ್ ಜೈಸ್ವಾಲ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆಸಮಾಜವಾದಿ ಪಕ್ಷ(ಎಸ್‌ಪಿ)ದ ಮಾಜಿ ಶಾಸಕ ಅತೀಕ್ ಅಹ್ಮದ್ ಮನೆ, ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿದೆ. 


COMMERCIAL BREAK
SCROLL TO CONTINUE READING

ಬುಧವಾರ ಬೆಳ್ಳಂಬೆಳಗ್ಗೆ ಅತೀಕ್ ಅಹ್ಮದ್ ಅವರ ಮನೆ, ಕಚೇರಿ ಸೇರಿದಂತೆ ಕನಿಷ್ಠ ಆರು ಕಡೆ ದಾಳಿ ನಡೆಸಿರುವ ಸಿಬಿಐ, ಭದ್ರತಾ ಪಡೆ ಜಂಟಿ ತಂಡ ತೀವ್ರ ಶೋಧ ನಡೆಸಿದೆ. ಹಲವಾರು ಆರೋಪಗಳನ್ನು ಎದುರಿಸುತ್ತಿರುವ ಸಮಾಜವಾದಿ ಪಕ್ಷದ ಮಾಜಿ ಸಂಸದ ಪ್ರಸ್ತುತ ಜೈಲಿನಲ್ಲಿದ್ದಾರೆ.


“ಬೆಳಿಗ್ಗೆ 7: 30 ಕ್ಕೆ ಭದ್ರತಾ ಪಡೆ ಮತ್ತು ಸಿಬಿಐ ತಂಡ ಪ್ರಯಾಗರಾಜ್‌ನಲ್ಲಿರುವ ಅತೀಕ್ ಅಹ್ಮದ್ ಅವರ ನಿವಾಸಕ್ಕೆ ಬಂದಿತು. ಬಳಿಕ ಹೊರಗಿನಿಂದ ಯಾರಿಗೂ ಒಳಗೆ ಹೋಗಲು ಅನುಮತಿ ನಿರಾಕರಿಸಲಾಗಿದೆ. ಈ ಬಗ್ಗೆ ನಮಗೆ ಇನ್ನೂ ವಿವರವಾದ ಮಾಹಿತಿ ಲಭ್ಯವಾಗಿಲ್ಲ”ಎಂದು ಅಹ್ಮದ್ ಅವರ ವಕೀಲರು ಹೇಳಿದ್ದಾರೆ. 


"ಲಕ್ನೋ ಮತ್ತು ದೆಹಲಿಯ ಸಿಬಿಐ ತಂಡಗಳು ಅತೀಕ್ ಅಹ್ಮದ್ ನಿವಾಸದ ಮೇಲೆ ದಾಳಿ ನಡೆಸಿರುವ" ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಶೋಧ ಸ್ಥಳಗಳ ಹೊರಗೆ ಪೊಲೀಸರು ಮತ್ತು ರಾಪಿಡ್ ಆಕ್ಷನ್ ಫೋರ್ಸ್ (ಆರ್‌ಎಎಫ್) ಹಾಜರಿದ್ದರು.


ಕಳೆದ ತಿಂಗಳು, ಲಕ್ನೋ ಮೂಲದ ರಿಯಲ್ ಎಸ್ಟೇಟ್ ವ್ಯಾಪಾರಿ ಜೈಸ್ವಾಲ್ ಅವರನ್ನು 2018 ರ ಡಿಸೆಂಬರ್‌ನಲ್ಲಿ ಅಪಹರಿಸಿ ಹಲ್ಲೆ ಮಾಡಿದ ಆರೋಪದ ಮೇಲೆ ಮಾಜಿ ಸಂಸದ ಮತ್ತು ಇತರ 17 ಜನರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.


2014 ರಲ್ಲಿ ಫುಲ್ಪುರ್ ಸಂಸದೀಯ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಟಿಕೆಟ್‌ನಲ್ಲಿ ಅಹ್ಮದ್ ಸ್ಪರ್ಧಿಸಿದ್ದರು.