ಮಂಗಳೂರು: ಕೆಫೆ ಕಾಫಿ ಡೇ ಮಾಲೀಕ-ಸಂಸ್ಥಾಪಕ ವಿ.ಜಿ.ಸಿದ್ಧಾರ್ಥ್ ಮೃತ ದೇಹದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಬಹಿರಂಗವಾಗಿದ್ದು, ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸಿದ್ಧಾರ್ಥ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. 


COMMERCIAL BREAK
SCROLL TO CONTINUE READING

ಸಿದ್ಧಾರ್ಥ್ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆ ವೈದ್ಯರು, 'ನೀರಿಗೆ ಬಿದ್ದು ಉಸಿರುಗಟ್ಟಿ ಸಾವು ಸಂಭವಿಸಿದೆ' ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದು, ಸದ್ಯ ಈ ವರದಿಯನ್ನು ಪ್ರಕರಣದ ತನಿಖಾಧಿಕಾರಿಯಾದ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಕೋದಂಡರಾಮ್ ಅವರಿಗೆ ಸಲ್ಲಿಸಿದ್ದಾರೆ.


ಅಲ್ಲದೆ, ಮೃತದೇಹದ ವಿವಿಧ ಭಾಗಗಳಿಂದ ಮಾದರಿಯನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಪ್ರಾಥಮಿಕ ವರದಿಯಲ್ಲಿ ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ದೇಹ ಇದ್ದ ಸ್ಥಿತಿ ಮತ್ತು ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ತಜ್ಞರು ಗಮನಿಸಿದ ಅಂಶಗಳನ್ನು ಆಧರಿಸಿ ವಿವರಿಸಲಾಗಿದೆ. ಹಾಗಾಗಿ ದೇಹದ ಇತರ ಭಾಗಗಳಿಂದ ಸಂಗ್ರಹಿಸಿದ ಮಾದರಿಗಳ ಪರೀಕ್ಷೆಯ ವರದಿ ಲಭ್ಯವಾದ ಬಳಿಕ ಅಂತಿಮ ವರದಿ ಸಲ್ಲಿಸುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. 


ಪ್ರಾಥಮಿಕ ವರದಿಯಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿರುವುದರಿಂದ ಸಿದ್ಧಾರ್ಥ್ ಸಾವಿನ ಬೆನ್ನಲ್ಲೇ ಉದ್ಭವವಾಗಿದ್ದ ಎಲ್ಲಾ ಉಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. 


ಸೋಮವಾರ ಸಂಜೆ ಸಕಲೇಶಪುರದಿಂದ ಮಂಗಳೂರಿಗೆ ಬರುವ ಮಾರ್ಗ ಮಧ್ಯೆ ಉಳ್ಳಾಲ ಸಮೀಪ ಇರುವ ಒಂದು ಕಿ.ಮೀ ಉದ್ದದ ಬ್ರಿಡ್ಜ್​ ಮೇಲೆ ಸಿದ್ಧಾರ್ಥ್ ಇಳಿದಿದ್ದರು. ಬಳಿಕ ಫೋನಿನಲ್ಲಿ ಮಾತನಾಡುತ್ತಾ ನಡೆದುಕೊಂಡು ಸಾಗಿದ್ದ ಅವರು ಒಂದು ಗಂಟೆಯಾದರೂ ಪತ್ತೆಯಾಗದ ಕಾರಣ ಕಾರ್ ಡ್ರೈವರ್ ಪೊಲೀಸರಿಗೆ ಕಾಣೆಯಾದ ಮಾಹಿತಿ ನೀಡಿದ್ದರು. ಬಳಿಕ ಬುಧವಾರ ಬೆಳಿಗ್ಗೆ ಅವರ ಶವ ನೆತ್ರಾವಡಿ ನದಿ ಹಿನ್ನೀರಿನಲ್ಲಿ ಪತ್ತೆಯಾಗಿತ್ತು.