ನವದೆಹಲಿ: ಪುಲ್ವಾಮಾ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದ ಸಿಸಿಟಿವಿ ತುಣುಕನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪಡೆದುಕೊಂಡಿದ್ದು, 40 ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮಾ ಆತ್ಮಾಹುತಿ ಬಾಂಬ್‌ ದಾಳಿಗೆ ಜೈಶ್‌ ಉಗ್ರನು ಬಳಸಿದ್ದ ಕೆಂಪು ಇಕೋ ಕಾರನ್ನು ಎನ್‌ಐಎ ಸಿಸಿಟಿವಿಯಲ್ಲಿ ಪತ್ತೆ ಹಚ್ಚಿದೆ. 


COMMERCIAL BREAK
SCROLL TO CONTINUE READING

ಎನ್ಐಎ ಮೂಲಗಳ ಪ್ರಕಾರ ಸಿಸಿಟಿವಿ ಫೋಟೆಜ್ ನಲ್ಲಿ ಕೆಂಪು ಇಕೋ ಕಾರಿನ ದೃಶ್ಯ ಸೆರೆಯಾಗಿದ್ದು, ಇದರಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಆದಿಲ್‌ ಅಹ್ಮದ್‌ ದಾರ್ ಸ್ಫೋಟಕ ತುಂಬಿದ್ದ ಕಾರ್ ಚಾಲನೆ ಮಾಡುತ್ತಿರುವುದು ಕಂಡುಬಂದಿದೆ. ವೀಡಿಯೊ ತುಣುಕನ್ನು ಆಧರಿಸಿ, ಎನ್ಐಎ ಕಾರಿನ ಮಾಲೀಕರನ್ನು ಗುರುತಿಸಿದ್ದು, ದಾಳಿಯಾದ ಬಳಿಕ ಕಾರಿನ ಮಾಲೀಕ ಕಾಣೆಯಾಗಿದ್ದಾರೆಂದು ಹೇಳಲಾಗಿದೆ.


2010-11ರ ಮಾದರಿಯ ಈ ಕಾರನ್ನು ರೀ-ಪೇಂಟ್ ಮಾಡಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಆತ್ಮಾಹುತಿ ದಾಳಿ ನಡೆದ ತಾಣದಲ್ಲಿ ಈ ಕಾರಿನ ಶಾಕರ್‌ಗಳು ಪತ್ತೆಯಾಗಿವೆ. ಅವುಗಳ ಆಧಾರದಲ್ಲಿ ಕಾರಿನ ಮಾಡೆಲ್‌ ದೃಡಪಟ್ಟಿದೆ ಎಂದು ಮೂಲಗಳು ತಿಳಿಸಿವೆ. 


ಮೂಲಗಳ ಪ್ರಕಾರ, ಕೆಂಪು ಇಕೋ ಕಾರಿನ್ನು ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್ಸಿನ ಸಮೀಪ ಪದೇ ಪದೇ ನೋಡಲಾಗಿದೆ. ಬೆಂಗಾವಲು ಪಡೆಯ ಮೂರನೇ ಬಸ್ ಚಾಲಕ ಎರಡರಿಂದ ಮೂರು ಬಾರಿ ಆ ಕಾರಿನ ಚಾಲಕನನ್ನು ದೂರ ಸರಿಯಲು ಸೂಚಿಸಿದ್ದಾರೆ. ಆದರೆ ಆತ ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಚಲಿಸುತ್ತಿದ್ದ ಎನ್ನಲಾಗಿದೆ. ಮೂಲಗಳ ಪ್ರಕಾರ, ಆತ ಮೊದಲ ಎರಡು ಬೆಂಗಾವಲು ಪಡೆ ವಾಹನವನ್ನು ಡಿಕ್ಕಿ ಹೊಡೆಯಲು ಪ್ರಯತ್ನಿಸಿದ್ದ ಎನ್ನಲಾಗಿದೆ.  


ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್ಸಿಗೆ ಈ ಕೆಂಪು ಕಾರನ್ನು ಉಗ್ರ ಆದಿಲ್‌ ಢಿಕ್ಕಿ ಹೊಡೆಸುವ ಸ್ವಲ್ಪ ಹೊತ್ತಿಗೆ ಮೊದಲಿನ ದೃಶ್ಯಾವಳಿ ಈ ಸಿಸಿಟಿವಿ ವಿಡಿಯೋದಲ್ಲಿ ದಾಖಲಾಗಿದೆ. ಶ್ರೀನಗರಕ್ಕೆ ಕೇವಲ 27 ಕಿ.ಮೀ ದೂರದಲ್ಲಿರುವ ಲೆಥೋರಾವನ್ನು ಬೆಂಗಾವಲು ಪಡೆ ತಲುಪಿದ ಸಂದರ್ಭದಲ್ಲಿ ಈ ಭೀಕರ ದಾಳಿ ಸಂಭವಿಸಿದೆ.