ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು 2019-21ರ ಅವಧಿಗೆ ವಿಶ್ವ ಚುನಾವಣಾ ಸಂಸ್ಥೆಗಳ ಸಂಘ (ಎ-ವೆಬ್) ನೂತನ ಅಧ್ಯಕ್ಷರಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡರು.


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ ನಡೆಯುತ್ತಿರುವ ಎ-ವೆಬ್‌ನ ನಾಲ್ಕನೇ ಮಹಾಸಭೆಯಲ್ಲಿ ಈ ಕುರಿತು ಘೋಷಣೆ ಮಾಡಲಾಗಿದ್ದು, 50 ದೇಶಗಳ 120 ಪ್ರತಿನಿಧಿಗಳು ಭಾಗವಹಿಸಿದ್ದರು. ರೊಮೇನಿಯಾದ ಅಧ್ಯಕ್ಷ ಲಾನ್ ಮಿಂಕು ರಾಡುಲೆಸ್ಕ್ ಅವರ ಬಳಿಕ ಸುನಿಲ್ ಅರೋರಾ ಅವರು ಎರಡು ವರ್ಷಗಳ ಅವಧಿಗೆ ಎ-ವೆಬ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. 


A-WEB ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಸುನಿಲ್ ಅರೋರ ಅವರು, ಇಸಿಐ ತನ್ನ ಸಂವಾದವನ್ನು ಇನ್ನಷ್ಟು ಬಲಪಡಿಸಲು ಎದುರು ನೋಡುತ್ತಿದೆ ಎಂದರಲ್ಲದೆ, ಭಾರತದ ಚುನಾವಣಾ ಆಯೋಗದಲ್ಲಿನ ನಂಬಿಕೆ ಮತ್ತು ವಿಶ್ವಾಸಕ್ಕಾಗಿ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಿದರು.


"A-WEBನಂತಹ ಸಂಸ್ಥೆಗಳು ನವೀನತೆಗಳು, ಅನುಭವವನ್ನು ಹಂಚಿಕೊಳ್ಳುವ ಮೂಲಕ ಅಮೂಲ್ಯವಾದ ಕೊಡುಗೆ, ವೃತ್ತಿಪರ ಬೆಂಬಲ ಮತ್ತು ಸಲಹೆಯನ್ನು ನೀಡುತ್ತವೆ. ಅದರ ಸದಸ್ಯರ ಬೆಂಬಲ ಮತ್ತು ಭಾಗವಹಿಸುವಿಕೆಯೊಂದಿಗೆ ಕೌಶಲ್ಯಗಳು, ಮುಕ್ತ, ನ್ಯಾಯೋಚಿತ, ವಿಶ್ವಾಸಾರ್ಹ ಮತ್ತು ವೃತ್ತಿಪರವಾಗಿ ನಿರ್ವಹಿಸಲಾದ ಚುನಾವಣೆಗಳು ಆರೋಗ್ಯಕರ ಪ್ರಜಾಪ್ರಭುತ್ವದ ತಳಹದಿಯಾಗಿದೆ" ಎಂದು ಅರೋರ ಹೇಳಿದರು.


A-WEBನ ನೂತನ ಉಪಾಧ್ಯಕ್ಷರಾಗಿ ದಕ್ಷಿಣ ಆಫ್ರಿಕಾ ಚುನಾವಣಾ ಆಯೋಗದ ಅಧ್ಯಕ್ಷ ಗ್ಲೆನ್ ವುಮಾ ಮಾಶಿನಿನಿ ಮತ್ತು ನೂತನ ಪ್ರಧಾನ ಕಾರ್ಯದರ್ಶಿಯಾಗಿ ಕೊರಿಯಾ ಗಣರಾಜ್ಯದ ಜೊಂಗ್‌ಯುನ್ ಚೋ ಅವರ ನೇಮಕವನ್ನು ಸಾಮಾನ್ಯ ಸಭೆ ಅಂಗೀಕರಿಸಿತು. A-WEBನ ಆದರ್ಶಗಳನ್ನು ಮುಂದುವರೆಸಲು ಹಾಗೂ ಅಗತ್ಯವಿದ್ದಾಗ ಪೂರ್ಣ ಬೆಂಬಲ ನೀಡುವುದಾಗಿ ನೂತನ ಪದಾಧಿಕಾರಿಗಳಿಗೆ ಆರೋರಾ ಭರವಸೆ ನೀಡಿದರು.