ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್`ಗೆ ಯಾವುದೇ ಮಹತ್ವ ಇಲ್ಲ: ಮಮತಾ ಬ್ಯಾನರ್ಜಿ
ಕೇಂದ್ರ ಸರ್ಕಾರದ ಅವಧಿಯೇ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಯೋಜನೆಗಳಿಗೆ ಯಾವುದೇ ಮಹತ್ವವಿಲ್ಲ ಎಂದು ಮಮತಾ ಹೇಳಿದ್ದಾರೆ.
ನವದೆಹಲಿ: ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ 5 ವರ್ಷಗಳ ಪೂರ್ಣಾವಧಿ ಬಜೆಟ್ ಮಂಡಿಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹರಿಹಾಯ್ದಿದ್ದಾರೆ.
ಇಂದು ಲೋಕಸಭೆಯಲ್ಲಿ ಕೇಂದ್ರ ಸಚಿವ ಪಿಯುಶ್ ಗೋಯಲ್ ಮಧ್ಯಂತರ ಬಜೆಟ್ ಮಂಡಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದ ಎನ್ ಡಿಎ ಸರ್ಕಾರ ಮಂಡಿಸಿದ ಮಧ್ಯಂತರ ಬಜೆಟ್'ಗೆ ಯಾವುದೇ ಮಹತ್ವ ಇಲ್ಲ. ಅತೀ ಶೀಘ್ರದಲ್ಲಿಯೇ ಕೇಂದ್ರ ಸರ್ಕಾರದ ಅವಧಿ ಮುಗಿಯಲಿರುವುದರಿಂದ ಪೂರ್ಣಾವಧಿ ಬಜೆಟ್ ಮಂಡಿಸುವ ನೈತಿಕ ಅಧಿಕಾರ ಅಥವಾ ಜವಾಬ್ದಾರಿ ಇಲ್ಲ ಎಂದು ಟೀಕಿಸಿದರು.
"ಮುಂದಿನ ಐದು ವರ್ಷಗಳವರೆಗೆ ಈ ಸರ್ಕಾರ ಅಧಿಕಾರದಲ್ಲಿ ಇರಲು ಸಾಧ್ಯವಾಗದ ಸನ್ನಿವೇಶದಲ್ಲಿ ಈ ಸರ್ಕಾರಕ್ಕೆ ನೈತಿಕ ಅಧಿಕಾರ ಅಥವಾ ಜವಾಬ್ದಾರಿ ಇಲ್ಲ. 5 ವರ್ಷ ಬಜೆಟ್ ಮಂಡಿಸುವ ಇಲ್ಲದ ಕಾಳಜಿ ಇದೀಗ ತೋರಿದರೆ ಏನು ಪ್ರಯೋಜನ? ಅವಧಿ ಮುಗಿಯುವವರೆಗೆ ಸರ್ಕಾರ ಇರಲಿದೆ. ಅವಧಿ ಮುಗಿದ ಬಳಿಕ ಔಷಧಿಯನ್ನು ಕೊಟ್ಟರೆ ಏನು ಪ್ರಯೋಜನ? ಅದಕ್ಕೆ ಯಾವ ಮಹತ್ವ ಇರಲಿದೆ? ಒಮ್ಮೆ ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಣೆ ಮಾಡಿದ ಬಳಿಕ ಈ ಬಜೆಟ್ ನ ಯಾವ ಯೋಜನೆಗಳ ಅನುಷ್ಠಾನ ಸಾಧ್ಯವಾಗದು. ಹಾಗಾಗಿ ಈ ಮದ್ಯಂತರ ಬಜೆಟ್ ಗೆ ಯಾವುದೇ ಮಹತ್ವವಿಲ್ಲ" ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರ ರೈತರಿಗಾಗಿ ಯಾವುದೇ ಉತ್ತಮ ಘೋಷಣೆ ಮಾಡಿಲ್ಲ. ಆದರೀಗ ಈ ಮಧ್ಯಂತರ ಬಜೆಟ್ ನಲ್ಲಿ ರೈತಪ್ರಿಯ ಮತ್ತು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿದೆ. ಆದರೆ ಸರ್ಕಾರದ ಅವಧಿಯೇ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಯೋಜನೆಗಳಿಗೆ ಯಾವುದೇ ಮಹತ್ವವಿಲ್ಲ ಎಂದು ಮಮತಾ ಹೇಳಿದ್ದಾರೆ.