ಬೆಳಗ್ಗೆ 6 ರಿಂದ ರಾತ್ರಿ 10 ವರೆಗೆ ಕಾಂಡೋಮ್ ಜಾಹೀರಾತುಗಳ ಪ್ರಸಾರಕ್ಕೆ ಕೇಂದ್ರದ ಕಡಿವಾಣ
ಟಿವಿ ಚಾನೆಲ್‌ಗಳಲ್ಲಿ ಇನ್ಮುಂದೆ ಬೆಳಗ್ಗೆ 6 ರಿಂದ ರಾತ್ರಿ 10 ವರೆಗೆ ಕಾಂಡೋಮ್ ಜಾಹೀರಾತುಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶಿಸಿದೆ.
ನವದೆಹಲಿ: ಟಿವಿ ಚಾನೆಲ್‌ಗಳಲ್ಲಿ ಇನ್ಮುಂದೆ ಬೆಳಗ್ಗೆ 6 ರಿಂದ ರಾತ್ರಿ 10 ವರೆಗೆ ಕಾಂಡೋಮ್ ಜಾಹೀರಾತುಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶಿಸಿದೆ.
ಕಾಂಡೋಮ್ ಜಾಹಿರಾತುಗಳು ಬಹಳ ಮುಜುಗರ ಉಂಟುಮಾಡುವಂತಿದ್ದು, ಕೇವಲ ಪ್ರಾಪ್ತ ವಯಸ್ಕರಿಗೆ ಮಾತ್ರವಾಗಿದ್ದು, ಇದನ್ನು ಕೌಟುಂಬಿಕ ಟಿವಿ ವೀಕ್ಷಣಾ ಸಮಯವೆಂದು ಪರಿಗಣಿಸುವ ಪ್ರೈಮ್ ಟೈಮ್‌ನಲ್ಲಿ ಪ್ರಸಾರ ಮಾಡಬಾರದು ಎಂದು ಹಲವು ಗ್ರಾಹಕರು ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಎಎಸ್‌ಸಿಐ(ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ)ನ ಅಧ್ಯಕ್ಷೆ ಶ್ವೇತಾ ಪುರಂದರೆ, ಇಂತಹ ಜಾಹೀರಾತುಗಳಿಗೆ ಸಮಯ ನಿಗದಿಗೊಳಿಸುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಲಹೆ ಕೋರಿದ್ದರು.
ಈ ಕುರಿತು ಪರಿಶೀಲನೆ ನಡೆಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಆದೇಶ ಹೊರಡಿಸಿದ್ದು, ರಾತ್ರಿ 10 ಗಂಟೆ ಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಮಾತ್ರ ಇಂತಹ ಜಾಹಿರಾತುಗಳನ್ನು ಪ್ರಸಾರ ಮಾಡಲು ಅನುಮತಿ ನೀಡಿದ್ದು, ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಕಾಂಡೋಮ್ ಜಾಹಿರಾತು ಪ್ರಸಾರಕ್ಕೆ ಕಡಿವಾಣ ಹಾಕಿದೆ.