ನವದೆಹಲಿ: ಕರ್ನಾಟಕದಲ್ಲಿ ಪೆಟ್ರೋಲ್, ಡೀಸಲ್ ಮೇಲಿನ ಸುಂಕವನ್ನು ಕಡಿಮೆ ಮಾಡಿದ ನಂತರ ಕೇಂದ್ರ ಸರಕಾರ ದೇಶಾದ್ಯಂತ ತೈಲಗಳ ಮೇಲಿನ ಸುಂಕವನ್ನು ಇಳಿಸಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಕೇಂದ್ರ ಸರ್ಕಾರ ತೈಲ ಬೆಲೆ ಇಳಿಸಿ ಘೋಷಣೆ ಮಾಡಿದ ಬೆನ್ನಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ದೇಶಾದ್ಯಂತ ತೈಲ ಬೆಲೆ ಏರಿಕೆಯಾದಾಗ ರಾಜ್ಯದ ಜನರ ಕಷ್ಟ ಅರಿತು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ 2 ರೂ. ಇಳಿಕೆ ಮಾಡಿದ್ದರು. ಇದೀಗ ಇದೇ ಕ್ರಮವನ್ನು ಕೇಂದ್ರ ಸರಕಾರ ಕಾಪಿ ಮಾಡಿದೆ. "ತೈಲ ಬೆಲೆ ಇಳಿಸುವಲ್ಲಿ ಕೇಂದ್ರ ಸರ್ಕಾರ ನಮ್ಮನ್ನು ಕಾಪಿ ಮಾಡಿದೆ" ಎಂದು ಹೇಳಿದರು.


ರಾಜ್ಯದಲ್ಲಿ ಪೆಟ್ರೋಲ್, ಡೀಸಲ್ ಮೇಲಿನ ವ್ಯಾಟ್ ಕಡಿತ ಮಾಡಲು ಸಾಧ್ಯವಿಲ್ಲ: ಹೆಚ್ಡಿಕೆ


ಮುಂದುವರೆದು ಮಾತನಾಡಿದ ಅವರು, ಎಲ್ಲಾ ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಇಳಿಸುವಂತೆ ಕೇಂದ್ರ ಸರ್ಕಾರ ಹೇಳಿದೆ. ಆದರೆ, ರಾಜ್ಯದಲ್ಲಿ ಸಾಲಮನ್ನಾ ಸೇರಿ ಹಲವಾರು ಪ್ರಗತಿಪರ ಯೋಜನೆ ಜಾರಿ ಮಾಡಲಾಗಿದ್ದು, ಖಾಸಗಿ ಸಾಲಮನ್ನಾ ಸಂಬಂಧ ಸುಗ್ರಿವಾಜ್ಞೆ ಹೊರಡಿಸಲಾಗಿದೆ. ಹಾಗಾಗಿ, ಈಗಾಗಲೇ ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ಮೇಲಿನ ಸೆಸ್ ಇಳಿಕೆ ಮಾಡಿರುವುದರಿಂದ ಮತ್ತೆ ವ್ಯಾಟ್ ಇಳಿಕೆ ಮಾಡಲು ಸಾಧ್ಯವಿಲ್ಲ ಎಂದು ದೇವೇಗೌಡರು ವಿವರಿಸಿದರು. 


ಪೆಟ್ರೋಲ್, ಡೀಸೆಲ್​ ಬೆಲೆ ರೂ. 2.50 ಇಳಿಸಿದ ಕೇಂದ್ರ; ಈ ಕ್ಷಣದಿಂದಲೇ ಪರಿಷ್ಕೃತ ದರ ಜಾರಿ


ಲೋಕಸಭೆ ಚುನಾವಣೆ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಎಸ್ಪಿ ಒಂದಾಗಿವೆ. ಇದಕ್ಕೆ ಕಾಂಗ್ರೆಸ್ ಎಂದಿಗೂ ವಿರೋಧ ವ್ಯಕ್ತಪಡಿಸಿಲ್ಲ. ಮಾಯಾವತಿ ಅವರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದು ಹೇಳಿದ್ದಾರೆ. ಹಾಗಂತ ಮಹಾಮೈತ್ರಿಗೆ ಹಿನ್ನಡೆಯಾಗಲಿದೆ ಎಂದು ತಪ್ಪಾಗಿ ಅರ್ಥೈಸುವುದು ಸರಿಯಲ್ಲ ಎಂದರು.