ನವದೆಹಲಿ:  ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾಗಿ ಕೇಂದ್ರ ಸರ್ಕಾರ ಕರ್ನಾಟಕ ಹೈಕೋರ್ಟ್ ಗೆ ತಿಳಿಸಿದೆ. 


COMMERCIAL BREAK
SCROLL TO CONTINUE READING

ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಇಂದು ಹೆಚ್ಚುವರಿ ಸಾಲಿಸಿಟರ್ ಜನರಲ್(ಎಎಸ್‍ಜಿ) ಪ್ರಭುಲಿಂಗ ನಾವಡಗಿ ಅವರು ಈ ಕುರಿತು ಹೇಳಿಕೆ ಸಲ್ಲಿಸಿದ್ದಾರೆ. ಅಲ್ಲದೇ ಈ ಕುರಿತು ಸಲ್ಲಿಸಲಾಗಿದ್ದ ಸಾರ್ವಜನಿಕ ಅರ್ಜಿ(ಪಿಐಎಲ್) ಸಹ ವಿಭಾಗೀಯ ಪೀಠದಿಂದ ಇತ್ಯರ್ಥಗೊಂಡಿದೆ. ಈ ಕುರಿತು ನವೆಂಬರ್ 13ರಂದೇ ರಾಜ್ಯಕ್ಕೆ ಮಾಹಿತಿ ನೀಡಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಲಿಂಗಾಯತ ಧರ್ಮ ಹಿಂದೂ ಧರ್ಮದ ಶಾಖೆ ಎಂಬ ತನ್ನ ಹಿಂದಿನ ನಿಲುವನ್ನು ಕೇಂದ್ರ ಸರ್ಕಾರ ಪುನುರುಚ್ಚರಿಸಿದೆ.


ಈ ಸಂಬಂಧ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಮತ್ತು ಕೇಂದ್ರ ಗೃಹ ಇಲಾಖೆ ಕೈಗೊಂಡ ನಿರ್ಧಾರವನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ ಎಂದು ಅವರು ಹೈಕೋರ್ಟ್‍ಗೆ ಮಾಹಿತಿ ನೀಡಿದರು. 


ಇದಕ್ಕೆ ಪ್ರತಿಕ್ರಿಯಿಸಿರುವ ಲಿಂಗಾಯತ ಧರ್ಮ ಮಹಾಸಭೆ ಅಧ್ಯಕ್ಷೆ ಮಾತೆ ಮಹಾದೇವಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. 


ದೆಹಲಿಯ ತಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಲಿಂಗಾಯತ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮಾತೆ ಮಹಾದೇವಿ, ಪ್ರತ್ಯೇಕ ಧರ್ಮಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಕೇಂದ್ರ ಸರ್ಕಾರ ನಮ್ಮ ಮನವಿಯನ್ನು ತಿರಸ್ಕರಿಸಿದೆ. ಹೈಕೊರ್ಟ್ ಗೆ ಸಲ್ಲಿಸಿರುವ ಅಫಿಡೆವಿಟ್ ನಲ್ಲಿ ಈ ಮಾಹಿತಿ ಇದೆ. ಕೇಂದ್ರ ಸರ್ಕಾರದ ನಿರ್ಣಯವನ್ನು ನಾವು ಒಪ್ಪವುದಿಲ್ಲ. ಇದು ಪ್ರತಿಭಟನಾ ಸಮಾವೇಶ. 


ಬೌದ್ದ, ಸಿಕ್ಕ್ ಪಾರ್ಸಿ ಇಸ್ಲಾಂ, ಕ್ರಿಶ್ಚಿಯನ್ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದೆ. ಲಿಂಗಾಯತಕ್ಕೂ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದರು.


ಲಿಂಗಾಯತ ಧರ್ಮ ಭಿನ್ನವಾದುದು:
ವೇದಗಳನ್ನು ನಾವು ಒಪ್ಪುವುದಿಲ್ಲ. ಲಿಂಗಾಯತ ಧರ್ಮ ಭಿನ್ನವಾದುದು. ನಾವು ಶವವನ್ನು ಸುಡುವುದಿಲ್ಲ, ಮಣ್ಣಲ್ಲಿ ಹೂಳುತ್ತೇವೆ. ನಾವು ಮೂರು ಕೋಟಿ ದೇವರನ್ನು ಪೂಜಿಸಲ್ಲ. ಹಿಂದೂ ಧರ್ಮದ ಆಚರಣೆಗಳಿಂದ ನಾವು ಭಿನ್ನವಾಗಿದ್ದೇವೆ. ಹಿಂದೂ ಧರ್ಮದ ಭಾಗವಾಗಿ ನಾವು ಉಳಿಯುವುದಿಲ್ಲ. ಜಯ ಸಿಗುವರೆಗೂ ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದರು.