ನವದೆಹಲಿ: ಮುಂಬರುವ ವಾರ್ಷಿಕ ಅಮರನಾಥ ಯಾತ್ರೆಗೆ "ಶೂನ್ಯ ದೋಷ" ನೀತಿಯನ್ನು ಅನುಸರಿಸಲು ಭದ್ರತಾ ಸಂಸ್ಥೆಗಳಿಗೆ ಕೇಂದ್ರ ಸರಕಾರ ಆದೇಶ ನೀಡಿದೆ. ಸಂಭವನೀಯ ಭಯೋತ್ಪಾದಕ ದಾಳಿಗಳ ಭೀತಿಯ ನಡುವೆಯೂ ಮೂರು ಲಕ್ಷಕ್ಕೂ ಅಧಿಕ ಯಾತ್ರಿಕರು ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿದೆ. 


COMMERCIAL BREAK
SCROLL TO CONTINUE READING

ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ, ಅಮರನಾಥ ಯಾತ್ರಾ ಮಾರ್ಗದಲ್ಲಿ ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (ಸಿಆರ್ಪಿಎಫ್) ನ 238 ಕಂಪನಿಗಳ ಸುಮಾರು 24,000 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ 2 ತಿಂಗಳ ಯಾತ್ರೆಗೆ ಸುಮಾರು ಶೇ.17 ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 


ಸಿಆರ್ಪಿಎಫ್ಗೆ ಸುಮಾರು 25,000 ಸೇನಾ ಪಡೆ, ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್) ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸಾಥ್ ನೀಡಲು ಈಗಾಗಲೇ ಯಾತ್ರೆ ಮಾರ್ಗದಲ್ಲಿ ಬೀಡುಬಿಟ್ಟಿದ್ದಾರೆ. ಅಮರನಾಥ್ ಯಾತ್ರೆ ಜೂನ್ 28 ರಿಂದ ಆರಂಭವಾಗಿ ಆಗಸ್ಟ್ 26ರವರೆಗೆ ಮುಂದುವರೆಯಲಿದೆ. 


ವರದಿಗಳ ಪ್ರಕಾರ, ಮುಂಬರುವ ಅಮರನಾಥ ಯಾತ್ರೆ ಸಂದರ್ಭವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ಭದ್ರತಾ ಪಡೆಗಳು ಶ್ರೀನಗರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ವಿವಿಧ ವಿಭಾಗಗಳ ಸೇನಾ ಪಡೆಗಳನ್ನು 
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪೊಲೀಸ್ ರ್ಯಾಂಕಿಂಗ್ ಅಧಿಕಾರಿಗಳ ಅಧೀಕ್ಷಕರು ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಈ ವರ್ಷ, ಸಂಶಯಾಸ್ಪದ ಚಟುವಟಿಕೆಗಳ ಬಗ್ಗೆ ನಿಗಾ ಇಡಲು ಡ್ರೋನ್'ಗಳನ್ನು ಮತ್ತು ಯಾತ್ರಿಗಳೊಂದಿಗೆ ಉತ್ತಮ ಸಂಪರ್ಕ ಹೊಂದಲು ಯಾತ್ರಿಗಳು ಬಳಸುವ ವಾಹನಗಳಲ್ಲಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೀಶನ್(RFID) ಟ್ಯಾಗ್ ಅಳವಡಿಸಲು ಸಚಿವಾಲಯ ನಿರ್ಧರಿಸಿದೆ.


ಅಲ್ಲದೆ, ಯಾತ್ರೆಗೆ ಎರಡು ದಿನಗಳ ಮೊದಲು 24X7 ಸಹಾಯವಾಣಿಯನ್ನು ಸಚಿವಾಲಯ ಆರಂಭಿಸಲಿದ್ದು, ಏನೇ ಸಮಸ್ಯೆಯಾದರೂ 1364 ಸಂಖ್ಯೆಗೆ ಕರೆ ಮಾಡಬಹುದು. ಸಿಸಿಟಿವಿ ಕ್ಯಾಮೆರಾಗಳು, ಬುಲೆಟ್ ಪ್ರೂಫ್ ಬಂಕರ್ಗಳು, ಶ್ವಾನ ತಂಡಗಳು ಮತ್ತು ಯಾತ್ರಾ ಮಾರ್ಗದಲ್ಲಿ ತ್ವರಿತ ಪ್ರತಿಕ್ರಿಯೆ ತಂಡಗಳನ್ನು ಸಚಿವಾಲಯ ನಿಯೋಜಿಸಲಿದ್ದು, ಯಾತ್ರಿಕರ ಚಲನೆಯನ್ನು ಉಪಗ್ರಹಗಳ ಮೂಲಕ ಪತ್ತೆಹಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಜಮ್ಮುವಿನ ಯಾತ್ರಿ ನಿವಾಸದಲ್ಲಿ ಕುಡಿಯುವ ನೀರು, ಶೌಚಾಲಯಗಳು, ತಂಗಲು ಸ್ವಚ್ಛವಾದ ಕೋಣೆಗಳು, ವಿಚಾರಣೆ ಕೌಂಟರ್ಗಳು, ಸಾರಿಗೆ, ಸಂವಹನ ಮತ್ತು ಬ್ಯಾಂಕಿಂಗ್ ಸೌಕರ್ಯಗಳನ್ನು ಒದಗಿಸಲಾಗಿದ್ದು, ಯಾತ್ರೆ ಮಾರ್ಗದಲ್ಲಿ ಸುಮಾರು 70 ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.