ಮುಂಗಾರು ಬೆಳೆಗಳಿಗೆ ಕೇಂದ್ರ ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ ಘೋಷಣೆ
ಮಳೆಗಾಲದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(MSP) ಸೂಚಿಸಿ ಕೇಂದ್ರ ಸರ್ಕಾರ ಬುಧವಾರ ಐತಿಹಾಸಿಕ ಆದೇಶ ಹೊರಡಿಸಿದೆ.
ನವದೆಹಲಿ: ಮಳೆಗಾಲದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(MSP) ಸೂಚಿಸಿ ಕೇಂದ್ರ ಸರ್ಕಾರ ಬುಧವಾರ ಐತಿಹಾಸಿಕ ಆದೇಶ ಹೊರಡಿಸಿದೆ. ಈ ಸಂಬಂಧ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ನಿರ್ಧಾರವನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಶ್ಲಾಘಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯ ಮೇಲೆ ಸಾಕಷ್ಟು ಜನಪರ ಯೋಜನೆಗಳ ಜಾರಿಗೆ ಮುಂದಾಗಿರುವ ಕೇಂದ್ರದ ಎನ್ಡಿಎ ಸರ್ಕಾರ ಅತಿವೃಷ್ಟಿ, ಅನಾವೃಷ್ಟಿಯಿಂದ ಸೂಕ್ತ ಬೆಂಬಲ ದೊರೆ ದೊರೆಯದೆ ಕಂಗಾಲಾಗಿದ್ದ ರೈತರ ಸಹಾಯಕ್ಕೆ ಮುಂದಾಗಿದೆ. ಅದರಂತೆ ಮುಂಗಾರಿನ ಬೆಳೆಗಳಿಗೆ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ.
ಈ ಹಿಂದೆ ಭತ್ತಕ್ಕೆ 1166 ರೂ. ಬೆಲೆ ಇತ್ತು. ಆದರೆ ಈ ವರ್ಷ ಸರ್ಕಾರ 1750ರೂ. ನಿಗದಿಪಡಿಸಿದ್ದು, ಬೆಲೆಯಲ್ಲಿ ಶೇ.12ರಷ್ಟು ಏರಿಕೆಯಾಗಿದೆ. ಇದಲ್ಲದೆ, ಮೆಕ್ಕೆ ಜೋಳದ ಎಮ್ಎಸ್ಪಿ ಕ್ವಿಂಟಲ್ಗೆ 1700 ರೂ., ಹತ್ತಿ ಕ್ವಿಂಟಾಲ್ಗೆ 5150 ರೂ. , ಸೂರ್ಯಕಾಂತಿ ಬೀಜಗಳು ಕ್ವಿಂಟಾಲ್ಗೆ 5388 ರೂ., ಸೋಯಾಬೀನ್ ಕ್ವಿಂಟಾಲ್ಗೆ 3399 ರೂ., ತೊಗರಿ ಕ್ವಿಂಟಾಲ್ಗೆ 5,675 ರೂ., ಉದ್ದು ಕ್ವಿಂಟಾಲ್‌ಗೆ 5,600 ರೂ., ಹೆಸರು ಬೇಳೆ ಕ್ವಿಂಟಾಲ್‌ಗೆ 6,975 ರೂ., ನೆಲಗಡಲೆ 4,890 ರೂ. ಕನಿಷ್ಠ ಬೆಂಬಲ ಬೆಲೆ ಘೋಷಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ರಾಜನಾಥ್ ಸಿಂಗ್ ಅವರು, "ಇದೊಂದು ಐತಿಹಾಸಿಕ ನಿರ್ಧಾರವಾಗಿದ್ದು, 2022 ರ ಹೊತ್ತಿಗೆ ಸರ್ಕಾರವು ಭರವಸೆ ನೀಡಿದಂತೆ ರೈತರ ಆದಾಯ ದ್ವಿಗುಣಗೊಳ್ಳಲಿದೆ. ಈ ನಿರ್ಧಾರವು ರೈತರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುವುದರೊಂದಿಗೆ, ಅವರ ಆರ್ಥಿಕ ಮಟ್ಟವನ್ನೂ ಹೆಚ್ಚಿಸಲಿದೆ" ಎಂದು ಹೇಳಿದ್ದಾರೆ.