ನವದೆಹಲಿ: ಕೇರಳದಲ್ಲಿ ಪ್ರವಾಹದಿಂದ ಉಂಟಾಗಿರುವ ಪ್ರತಿಕೂಲ ಪರಿಣಾಮ ಮತ್ತು ಅನಿಶ್ಚಿತ ಹವಾಮಾನದ ಪರಿಸ್ಥತಿ ಹಿನ್ನೆಲೆಯಲ್ಲಿ ಕೇಂದ್ರ ವಿಜ್ಞಾನ ಸಚಿವಾಲಯವು ರಾಜ್ಯ ರಾಜಧಾನಿ ತಿರುವನಂತಪುರಂನಲ್ಲಿ ಮುಂದಿನ ತಿಂಗಳು ಸೈಕ್ಲೋನ್ ಎಚ್ಚರಿಕೆ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿರುವುದಾಗಿ ಮಂಗಳವಾರ ಹೇಳಿದೆ.


COMMERCIAL BREAK
SCROLL TO CONTINUE READING

ಪ್ರಸ್ತುತ ಚೆನ್ನೈ, ವಿಶಾಖಪಟ್ಟಣಂ, ಭುವನೇಶ್ವರ, ಕೊಲ್ಕತ್ತಾ, ಅಹಮದಾಬಾದ್ ಮತ್ತು ಮುಂಬೈಗಳಲ್ಲಿ ಇಂಡಿಯನ್ ಮೆಟರೊಲಾಜಿಕಲ್ ಡಿಪಾರ್ಟ್ಮೆಂಟ್ (ಐಎಮ್ಡಿ) ಚಂಡಮಾರುತ ಎಚ್ಚರಿಕೆ ಕೇಂದ್ರಗಳನ್ನು ಹೊಂದಿದೆ. ಹಾಗಾಗಿ ತಿರುವನಂತಪುರಂನಲ್ಲಿ ಸ್ಥಾಪನೆಯಾಗಲಿರುವ ನೂತನ ಕೇಂದ್ರವು ಕೇರಳ ಮತ್ತು ಕರ್ನಾಟಕದ ಅಗತ್ಯತೆಗಳನ್ನು ಪೂರೈಸಲಿದೆ. ಅಲ್ಲದೆ, ಪ್ರಸ್ತುತ ಹವಾಮಾನ ಮುನ್ಸೂಚನೆ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ಹವಾಮಾನ ಎಚ್ಚರಿಕೆ ಮತ್ತು ಕರಾವಳಿ ಬುಲೆಟಿನ್ಗಳನ್ನು ಬಿಡುಗಡೆ ನೂತನ ಉಪಕರಣಗಳನ್ನೂ ಈ ಕೇಂದ್ರ ಹೊಂದಲಿದೆ.


ಅಲ್ಲದೆ, 2019 ರ ಅಂತ್ಯದ ವೇಳೆಗೆ ಕೇರಳದ ಉತ್ತರದ ಭಾಗಗಳನ್ನು ಒಳಗೊಂಡಂತೆ ಮಂಗಳೂರಿನಲ್ಲಿ ಸಿ-ಬ್ಯಾಂಡ್ ಡಾಪ್ಲರ್ ವೆದರ್ ರಾಡಾರ್ ಅನ್ನು ಸ್ಥಾಪಿಸಲು ಸಚಿವಾಲಯ ಯೋಜಿಸಿದೆ. ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಈಗಾಗಲೇ ಎರಡು ಡಾಪ್ಲರ್ ಹವಾಮಾನ ರಾಡಾರ್ಗಳಿವೆ. "ಈ ಮೂರೂ ರಾಡಾರ್ಗಳು ಸಂಪೂರ್ಣ ರಾಜ್ಯದ ಮಳೆ ಮತ್ತು ಹವಾಮಾನದ ತೀವ್ರತೆಯನ್ನು ಮಾನಿಟರ್ ಮಾಡಲಿದ್ದು, ಹವಾಮಾನದ ಏರಿಳಿತಗಳ ಬಗ್ಗೆ ಜನರಿಗೆ ಮುಂಚಿತವಾಗಿ ತಿಳಿಸಲಿವೆ" ಎಂದು ಸಚಿವಾಲಯ ತಿಳಿಸಿದೆ.


ಇದರೊಂದಿಗೆ, ಭಾರತ ಹವಾಮಾನ ಇಲಾಖೆಯು ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳಿಗೆ ನೂತನ ಪರಿಕರಗಳ ಬಳಕೆ ಮತ್ತು ಪರಿಣಾಮಕಾರಿ ನಿರ್ಧಾರ ತೆಗೆದುಕೊಳ್ಳುವ ಕುರಿತು ಅರಿವು ಮತ್ತು ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳುವುದಾಗಿ ಹೇಳಿದೆ.