ಬೆಂಗಳೂರು: ಬಿಜೆಪಿಯೇತರ ಸರ್ಕಾರ ರಚನೆಗೆ ಪಣತೊಟ್ಟಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈಗ ಹಲವು ರಾಷ್ಟ್ರೀಯ ಪ್ರಾದೇಶಿಕ ಪಕ್ಷಗಳ ನಾಯಕರನ್ನು ಭೇಟಿ ಮಾಡಿದ ನಂತರ ಇಂದು ರಾತ್ರಿ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಸಿಎಂ ಹೆಚ್ಡಿಕೆ ಅವರನ್ನು ಭೇಟಿ ಮಾಡಿ ಮಹತ್ವದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.



COMMERCIAL BREAK
SCROLL TO CONTINUE READING

ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸದಲ್ಲಿ ಮಂಗಳವಾರದಂದು ರಾತ್ರಿ 9.30 ಕ್ಕೆ ಭೇಟಿ ಮಾಡಿ ಕೇಂದ್ರದಲ್ಲಿ ಪ್ರಾದೇಶಿಕ ಪಕ್ಷಗಳ ನೇತೃತ್ವದಲ್ಲಿ ಸರ್ಕಾರ ರಚಿಸುವ ವಿಚಾರವಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ. ದೇಶದಲ್ಲಿ ಮೋದಿ ಸರ್ಕಾರದ ವಿರುದ್ಧ ಪ್ರಾದೇಶಿಕ ಪಕ್ಷಗಳು ಅಸಮಾಧಾನಗೊಂಡಿದ್ದು, ಈ ಹಿನ್ನಲೆಯಲ್ಲಿ ಈ ಬಾರಿ ಬಿಜೆಪಿಯೇತರ ಸರ್ಕಾರ ರಚಿಸುವ ನಿಟ್ಟಿನಲ್ಲಿ ನಾಯ್ಡು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.



ಈಗಾಗಲೇ ಚುನಾವಣಾ ಫಲಿತಾಂಶಕ್ಕೂ ಮುನ್ನ ಹಲವಾರು ನಾಯಕರನ್ನು ಭೇಟಿ ಮಾಡಿರುವ ಚಂದ್ರಬಾಬು ನಾಯ್ಡು ಯಾವುದೇ ಕಾರಣಕ್ಕೂ ಕೂಡ ಪ್ರಾದೇಶಿಕ ಪಕ್ಷಗಳು ಎನ್.ಡಿ.ಎ ಒಕ್ಕೂಟಕ್ಕೆ ನಂಬರ್ ಕೊರತೆ ಎದುರಾದಲ್ಲಿ ಬೆಂಬಲ ನೀಡದಂತೆ ಹಾಗೂ ಪ್ರಾದೇಶಿಕ ಪಕ್ಷದ ನೇತೃತ್ವದಲ್ಲಿ ಸರ್ಕಾರವನ್ನು ರಚಿಸುವಂತೆ ಎಲ್ಲ ನಾಯಕರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.


ಈ ಹಿಂದೆ ಎನ್.ಡಿ.ಎ ಭಾಗವಾಗಿದ್ದ ಸಿಎಂ ನಾಯ್ಡು ಮೋದಿ ನೇತೃತ್ವದ ಸರ್ಕಾರವು ಆಂಧ್ರಕ್ಕೆ ವಿಶೇಷ ಆರ್ಥಿಕ ಸ್ಥಾನಮಾನ ನೀಡದ ಹಿನ್ನಲೆಯಲ್ಲಿ ಸರ್ಕಾರದಿಂದ ಹೊರಬಂದಿದ್ದರು. ಅಂದಿನಿಂದ ಪ್ರಾದೇಶಿಕ ಪಕ್ಷಗಳ ಒಕ್ಕೂಟ ಹಾಗೂ ಬಿಜೆಪಿಯೇತರ ಸರ್ಕಾರ ರಚನೆಗೆ ನಾಯ್ಡು ಪ್ರಯತ್ನಿಸುತ್ತಿದ್ದಾರೆ.