ಚಂದ್ರಯಾನ-2 ಆರ್ಬಿಟರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ: ಇಸ್ರೋ ಮುಖ್ಯಸ್ಥ
ಚಂದ್ರಯಾನ-2 ಆರ್ಬಿಟರ್ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ವಿಕ್ರಮ್ ಲ್ಯಾಂಡರ್ ನಿಂದ ಇನ್ನೂ ಯಾವುದೇ ಸಿಗ್ನಲ್ ಸಿಕ್ಕಿಲ್ಲ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ತಿಳಿಸಿದ್ದಾರೆ.
ಅಹಮದಾಬಾದ್: ಚಂದ್ರಯಾನ-2 ಆರ್ಬಿಟರ್ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ವಿಕ್ರಮ್ ಲ್ಯಾಂಡರ್ ನಿಂದ ಇನ್ನೂ ಯಾವುದೇ ಸಿಗ್ನಲ್ ಸಿಕ್ಕಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಕೆ.ಶಿವನ್ ತಿಳಿಸಿದ್ದಾರೆ.
ಐಎಸ್‌ಎಸ್‌ಸಿ ಸಮ್ಮೇಳನದಲ್ಲಿ ಭಾಗವಹಿಸಲು ಅಹಮದಾಬಾದ್ ಗೆ ಆಗಮಿಸಿದ ಇಸ್ರೋ ಅಧ್ಯಕ್ಷ ಕೆ.ಕೆ. ಶಿವನ್ ಸುದ್ದಿಗಾರರೊಂದಿಗೆ ಮಾತನಾಡಿ, ಚಂದ್ರಯಾನ-2 ಆರ್ಬಿಟರ್ ತುಂಬಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ಪೇಲೋಡ್‌ಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ. ಆದರೆ, ಲ್ಯಾಂಡರ್‌ನಿಂದ ನಮಗೆ ಯಾವುದೇ ಸಿಗ್ನಲ್ ಬಂದಿಲ್ಲ. ರಾಷ್ಟ್ರೀಯ ಮಟ್ಟದ ಸಮಿತಿಯು ಈಗ ಲ್ಯಾಂಡರ್‌ನಲ್ಲಿ ಆಗಿರುವ ಸಮಸ್ಯೆಗಳು, ತಪ್ಪುಗಳ ಬಗ್ಗೆ ವಿಶ್ಲೇಷಿಸುತ್ತಿದೆ ಎಂದು ತಿಳಿಸಿದರು.
ಸಿಸ್ಟಮ್ಸ್ ಎಂಜಿನಿಯರಿಂಗ್ ಮತ್ತು ರಾಷ್ಟ್ರೀಯ ಅಭಿವೃದ್ಧಿ ವಿಷಯದ ಕುರಿತು ಈ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ, ಇಸ್ರೋ ಭವಿಷ್ಯದ ಕಾರ್ಯಗಳನ್ನು ನಿರ್ಧರಿಸಲಾಗುತ್ತದೆ. ಈ ಸಂದರ್ಭದಲ್ಲಿ, ಮುಂದಿನ ದಿನಗಳಲ್ಲಿ ಪಿಎಸ್‌ಎಲ್‌ವಿಯಿಂದ ಕಾರ್ಟೊ -3 ಉಪಗ್ರಹವನ್ನು ಉಡಾಯಿಸಲಾಗುವುದು. ಇದಲ್ಲದೆ, ಜಿಎಸ್ ಸೆಟ್ ಒನ್ ಮಿಷನ್ ಸಹ ಪ್ರಾರಂಭಿಸಲಾಗುವುದು ಎಂದು ಇಸ್ರೋ ಮುಖ್ಯಸ್ಥರು ಮಾಹಿತಿ ನೀಡಿದರು.
ಮುಂದುವರೆದು ಮಾತನಾಡುತ್ತಾ, ಮುಂದಿನ ದಿನಗಳಲ್ಲಿ ಇಸ್ರೋ ಸೂರ್ಯನ ಬಗ್ಗೆ ಅಧ್ಯಯನ ಆರಂಭಿಸಲಿದೆ. ಜತೆಗೆ ಭಾರತೀಯ ಬಾಹ್ಯಾಕಾಶ ನೌಕೆಯಲ್ಲಿ ಮನುಷ್ಯರನ್ನು ಕಳುಹಿಸುವ ಬಗ್ಗೆ ಅಧ್ಯಯನ ನಡೆಸಲಾಗುವುದು. ಅಲ್ಲದೆ, ಸಣ್ಣ ಉಪಗ್ರಹಗಳ ಉಡಾವಣೆಗೆ ಇಸ್ರೋ ರಾಕೆಟ್ ಗಳನ್ನೂ ಸಹ ಅನ್ವೇಷಿಸಲಿದೆ. ಇವು ಇಸ್ರೋದ ಮುಂದಿನ ಮಹತ್ವದ ಗುರಿಗಳು ಎಂದು ಕೆ.ಶಿವನ್ ಮಾಹಿತಿ ನೀಡಿದರು.