ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ
ಐತಿಹಾಸಿಕ ಚಂದ್ರಯಾನ- 2 ಉಡಾವಣೆ ಆಂಧ್ರಪ್ರದೇಶದ ಶ್ರೀಹರಿಕೋಟಾ ದಿಂದ ಮಧ್ಯಾಹ್ನ 2.43 ಆಗಲಿದೆ ಎಂದು ಇಸ್ರೋ ತಿಳಿಸಿದೆ.
ನವದೆಹಲಿ: ಐತಿಹಾಸಿಕ ಚಂದ್ರಯಾನ- 2 ಉಡಾವಣೆ ಆಂಧ್ರಪ್ರದೇಶದ ಶ್ರೀಹರಿಕೋಟಾ ದಿಂದ ಮಧ್ಯಾಹ್ನ 2.43 ಆಗಲಿದೆ ಎಂದು ಇಸ್ರೋ ತಿಳಿಸಿದೆ.
ಕಳೆದ ವಾರ ತನ್ನ ಮೊದಲ ಪ್ರಯತ್ನದಲ್ಲಿ ಕೊನೆಯ ಕ್ಷಣದ ವೇಳೆ ಉಡಾವಣೆಯನ್ನು ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಳಿಸಲಾಗಿತ್ತು. ಈ ಬಾರಿ ಆ ರೀತಿಯಾಗದಂತೆ ಮುನ್ನೆಚ್ಚರಿಕೆ ವಹಿಸಿರುವ ಇಸ್ರೋ ವಿಜ್ಞಾನಿಗಳು ಯಶಸ್ವಿ ಉಡಾವಣೆಗೆ ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಚಂದ್ರಯಾನ-2 ಯಶಸ್ವಿಯಾದಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ದೇಶ ಎನ್ನುವ ಖ್ಯಾತಿಯನ್ನು ಭಾರತ ಹೊಂದಲಿದೆ. ಈಗಾಗಲೇ ರಷ್ಯಾ, ಅಮೇರಿಕಾ, ಚೀನಾ, ಈ ಸಾಧನೆಯನ್ನು ಮಾಡಿವೆ.
ಕಳೆದ ವಾರ ಉಡಾವಣೆ ಮಾಡುವ ಸಂದರ್ಭದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನಲೆಯಲ್ಲಿ ಉಡಾವಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಇಸ್ರೋ ಅಧಿಕಾರಿಗಳು ಹೇಳುವಂತೆ ಈ ಸಮಸ್ಯೆಯನ್ನು ನಿಗಿಸದೆ ಹೋಗಿದ್ದಲ್ಲಿ ಈ ಯೋಜನೆ ಸಂಪೂರ್ಣ ವಿಫಲವಾಗುತ್ತಿತ್ತು ಎಂದು ಹೇಳಿದ್ದಾರೆ.'ಸಮಸ್ಯೆ ಗಂಭೀರವಾಗಿತ್ತು, ಆದರೆ ಅದನ್ನು ನಿವಾರಿಸುವುದು ಕೂಡ ಅಷ್ಟೇ ಸರಳವಾಗಿತ್ತು. ಅದೃಷ್ಟವಶಾತ್ ನಾವು ಆ ಸಮಸ್ಯೆಯನ್ನು ಪತ್ತೆ ಹಚ್ಚಿದೆವು. ಇಲ್ಲದಿದ್ದರೆ ಈ ಯೋಜನೆ ಸಂಪೂರ್ಣ ವಿಫಲವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಚಂದ್ರಯಾನ-2 ಯೋಜನೆಯ ವಿಶೇಷತೆ ಎಂದರೆ ಅಮೇರಿಕಾದ ನಾಸಾ ಯೋಜನೆಗಿಂತ 20 ಪಟ್ಟು ವೆಚ್ಚ ಕಡಿಮೆ ಎಂದು ಹೇಳಲಾಗುತ್ತಿದೆ. ಈ ಯೋಜನೆಗೆ ಸುಮಾರು 1000 ಕೋಟಿ ರೂಗಳನ್ನು ವ್ಯಯ ಮಾಡಲಾಗಿದೆ. ಇದು ಹಾಲಿವುಡ್ ನ ಅವೆಂಜರ್ ಎಂಡ್ ಗೇಂ ಗಿಂತಲೂ ಕಡಿಮೆ ಎಂದು ಹೇಳಲಾಗಿದೆ.