ಪಕ್ಷಾಂತರ ಪ್ರಜಾಪ್ರಭುತ್ವಕ್ಕೇ ಮಾರಕ: ಸಿದ್ದರಾಮಯ್ಯ
ನಾನು ಶಾಸಕಾಂಗ ಪಕ್ಷದ ನಾಯಕನಾಗಿದ್ದು, ನನ್ನ ಪಕ್ಷದ ಸದಸ್ಯರಿಗೆ ವಿಪ್ ಜಾರಿ ಮಾಡುವ ಅಧಿಕಾರ ನನಗಿದೆ, ಹೀಗಿರುವಾಗ ಸುಪ್ರೀಂ ಕೋರ್ಟ್ ವಿಫ್ ಜಾರಿ ಬಗ್ಗೆ ನೀಡಿರುವ ಆದೇಶ ನಿಜಕ್ಕೂ ಗೊಂದಲ ಮೂಡಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ಪಕ್ಷಾಂತರ ಮಾಡುವುದು ಪ್ರಜಾಪ್ರಭುತ್ವಕ್ಕೇ ಮಾರಕ. ಈ ಪಕ್ಷಾಂತರ ಪಿಡುಗನ್ನು ಕೊನೆಗಾಣಿಸಬೇಕಿದೆ ಎಂದು ಸಮ್ಮಿಶ್ರ ಸರ್ಕಾರದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸದನದಲ್ಲಿಂದು ವಿಶ್ವಾಸ ಮತ ಯಾಚನೆಗೂ ಮುನ್ನ ನಡೆದ ಚರ್ಚೆಯಲ್ಲಿ ಕ್ರಿಯಾ ಲೋಪದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಪಕ್ಷಾಂತರ ಪಿಡುಗು ಪ್ರಜಾಪ್ರಭುತ್ವದ ಅಡಿಗಲ್ಲನ್ನು ಅಲ್ಲಾಡಿಸುತ್ತಿದೆ. ಸಂವಿಧಾನದ ಕೆಲವು ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಾಗಿದೆ ಎಂದು ಹೇಳಿದರು.
ಅಂದು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಕೀರ್ತಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಸಲ್ಲುತ್ತದೆ. ಸಂವಿಧಾನದ ಕುರಿತು ಸ್ಪಷ್ಟನೆ ಕೇಳುವ ಉದ್ದೇಶದಿಂದ ಕ್ರಿಯಾ ಲೋಪ ಪ್ರಸ್ತಾಪಿಸಿದ್ದೇನೆ. ನಾನು ಶಾಸಕಾಂಗ ಪಕ್ಷದ ನಾಯಕನಾಗಿದ್ದು, ನನ್ನ ಪಕ್ಷದ ಸದಸ್ಯರಿಗೆ ವಿಪ್ ಜಾರಿ ಮಾಡುವ ಅಧಿಕಾರ ನನಗಿದೆ, ಹೀಗಿರುವಾಗ ಸುಪ್ರೀಂ ಕೋರ್ಟ್ ವಿಫ್ ಜಾರಿ ಬಗ್ಗೆ ನೀಡಿರುವ ಆದೇಶ ನಿಜಕ್ಕೂ ಗೊಂದಲ ಮೂಡಿಸಿದೆ. ವಿಪ್ ಗೆ ಚ್ಯುತಿ ಆಗುವಂತೆ ಸುಪ್ರೀಂ ಕೋರ್ಟ್ ಆದೇಶವಿದೆ. ಸರ್ಕಾರ ಇಂದು ವಿಶ್ವಾಸ ಮತ ಯಾಚನೆ ಮಾಡಲು ಮುಂದಾಗಿದೆ. ಆದರೆ ಸುಪ್ರೀಂಕೋರ್ಟ್ ತೀರ್ಪಿನಿಂದ ರಾಜೀನಾಮೆ ನೀಡಿರುವ 15 ಶಾಸಕರು ಇಂದು ಸದನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. 10ನೇ ಶೆಡ್ಯೂಲ್ ಜೀವಂತವಾಗಿರುವಾಗಲೇ ಸುಪ್ರೀಂಕೋರ್ಟ್ ಇಂತಹ ಆದೇಶ ನೀಡಿದೆ. ಇದರಿಂದ ನಮ್ಮ ಹಕ್ಕಿನ ಉಲ್ಲಂಘನೆಯಾಗಿದೆ. ಈ ಬಗ್ಗೆ ಸ್ಪೀಕರ್ ಸ್ಪಷ್ಟೀಕರಣ ನೀಡಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಭಾರತದ ರಾಜಕಾರಣದಲ್ಲಿ ಪಕ್ಷಾಂತರ ಪ್ರಸಂಗದ ಕುರಿತು ಹೆಲೆವು ನಿದರ್ಶನಗಳನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, 1967ರಲ್ಲಿ ಗಯಾಲಾಲ್ ಒಂದೇ ದಿನದಲ್ಲಿ 3 ಬಾರಿ ಪಕ್ಷಾಂತರ ಮಾಡಿದರು. ಆಗ ದೇಶದಲ್ಲಿ ಪಕ್ಷಾಂತರದ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಕಾಂಗ್ರೆಸ್ನಿಂದ ಯುನೈಟೆಡ್ ಫ್ರಂಟ್ಗೆ ಮತ್ತೆ ಯುನೈಟೆಡ್ ಫ್ರಂಟ್ನಿಂದ ಕಾಂಗ್ರೆಸ್ಗೆ ಪಕ್ಷಾಂತರ ಮಾಡಿ ಇಡೀ ದೇಶದಲ್ಲಿ ಕೋಲಾಹಲ ಸೃಷ್ಟಿಸಿದ್ದರು. ಈ ಘಟನೆ ಬಳಿಕ ರಾಜಕೀಯ ನಾಯಕರು ಪಕ್ಷಾಂತರ ಪಿಡುಗನ್ನು ನಿವಾರಣೆ ಮಾಡಲು ಮುಂದಾದರು ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಮಧ್ಯ ಮಾತನಾಡಿದ ಬಿಜೆಪಿ ನಾಯಕರು, ಸಿದ್ದರಾಮಯ್ಯ ಅವರು ವಿಶ್ವಾಸಮತಯಾಚನೆ ಬಗ್ಗೆ ಚರ್ಚೆ ನಡೆಸದೆ ಕ್ರಿಯಾ ಲೋಪದ ಬಗ್ಗೆ ಮಾತನಾಡಿ ಸದನ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಆದರೆ, ಎಲ್ಲರಿಗೂ ಮಾತನಾಡಲು ಅವಕಾಶವಿದೆ ಎಂದು ಹೇಳಿದ ಸ್ಪೀಕರ್, ಸಿದ್ದರಾಮಯ್ಯ ಮಾತು ಮುಂದುವರೆಸಲು ಅನುಮತಿ ನೀಡಿದರು.