ನವದೆಹಲಿ: ನಿಮಗೆ ಬಂಪರ್ ಬೆಳೆ ದೊರೆಯಬೇಕೆಂದರೆ ನೀವು ವೇದ ಮಂತ್ರ ಪಠಣ ಮಾಡಬೇಕು ಎನ್ನುವ ವಿಚಿತ್ರ ಸಲಹೆಯನ್ನು ಗೋವಾ ಸರ್ಕಾರ ರೈತರಿಗೆ ನೀಡಿದೆ.


COMMERCIAL BREAK
SCROLL TO CONTINUE READING

ಅಚ್ಚರಿಯೆಂದರೆ ಸರ್ಕಾರದ ಕೃಷಿ ಇಲಾಖೆಯು ರೈತರಿಗೆ ಕಾಸ್ಮಿಕ್ ಫಾರ್ಮಿಂಗ್ ವಿಧಾನವನ್ನು ಅನುಸರಿಸಲು ಹೇಳಿದೆ. ಇದರ ಪ್ರಕಾರ ಗದ್ದೆಯಲ್ಲಿ ಮಂತ್ರವನ್ನು ಪಠಣ ಮಾಡಬೇಕು ಆಗ ಉತ್ತಮ ಇಳುವರಿ ಬರುತ್ತದೆ ಎನ್ನುವ ಸಲಹೆಯನ್ನು ಇಲಾಖೆ ಹೇಳಿದೆ.ಸರ್ಕಾರದ ಅಧಿಕಾರಿಗಳು ಹೇಳುವಂತೆ ಈಗಾಗಲೇ ಈ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಶಿವ ಯೋಗ್ ಫೌಂಡೇಶನ್ ಮತ್ತು ಬ್ರಹ್ಮಕುಮಾರಿಗಳಂತಹ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.


ಕೃಷಿ ಸಚಿವ ವಿಜಯ್ ಸರ್ದೇಸಾಯಿ ಮತ್ತು ಕೃಷಿ ನಿರ್ದೇಶಕ ನೆಲ್ಸನ್ ಫಿಗ್ಯೆರೆಡೋ ಇತ್ತೀಚೆಗೆ ಗೋವಾದಲ್ಲಿ ರೈತರಿಗೆ ಕಾಸ್ಮಿಕ್ ಕೃಷಿ ಹೇಗೆ ಪ್ರಯೋಜನವಾಗಬಹುದು ಎಂದು ನೋಡಲು ಶಿವ ಯೋಗ ಕೃಷಿ ಪ್ರವರ್ತಕರಾದ ಹರಿಯಾಣದ ಗುರಗಾಂವ್ ನಲ್ಲಿ ಗುರು ಶಿವಾನಂದರನ್ನು ಭೇಟಿ ಮಾಡಿದರು.ಈ ಕುರಿತಾಗಿ ಪ್ರತಿಕ್ರಿಯಿಸಿರುವ ನೆಲ್ಸನ್ ಫಿಗ್ಯೆರೆಡೋ  "ಕೃಷಿ ಇಲಾಖೆಯು ಸಾವಯವ ಮತ್ತು ಪರಿಸರ ಸ್ನೇಹಿ ಕೃಷಿ ಮಾರ್ಗವನ್ನು ಅನುಸರಿಸಲು ಬಯಸಿದೆ. ಕಾಸ್ಮಿಕ್ ಕೃಷಿ ಮತ್ತು ಇದೇ ರೀತಿಯ ಚಟುವಟಿಕೆಗಳ ಈಗಾಗಲೇ ಪ್ರಯೋಗ ಮಾಡಿರುವವರ ಜೊತೆ ಸರ್ಕಾರ ಮಾತುಕತೆ ನಡೆಸುತ್ತಿದೆ, ಇದು ಸಾವಯವ ರೀತಿಯಲ್ಲಿ ಕೃಷಿ ಇಳುವರಿಯನ್ನು ಹೆಚ್ಚಿಸಬಹುದು. ಶಿವ ಯೋಗ್ ಫೌಂಡೇಶನ್ ಮಾರ್ಗದರ್ಶನದಲ್ಲಿ ರೈತರಿಗೆ 'ಕಾಸ್ಮಿಕ್ ಕೃಷಿ' ಪ್ರಾಮುಖ್ಯತೆ ಬಗ್ಗೆ ವಿವರಣೆ ನೀಡಲಾಗುತ್ತದೆ ಎಂದು ಅವರು ಹೇಳಿದರು.


ಕಾಸ್ಮಿಕ್ ಕೃಷಿಯ ಭಾಗವಾಗಿ ರೈತರು 20 ದಿನಗಳಲ್ಲಿ ಕನಿಷ್ಠ 20 ನಿಮಿಷಗಳ ಕಾಲ 'ವೇದ ಮಂತ್ರ'ವನ್ನು ಪಠಿಸಬೇಕಾಗುತ್ತದೆ. ಆ ಮೂಲಕ  ಬ್ರಹ್ಮಾಂಡದ ಶಕ್ತಿಯು ಗದ್ದೆಗೆ ಪ್ರವೇಶವಾಗುವುದರಿಂದ ಬೀಜವು ಉತ್ತಮವಾಗಿ ಮೊಳಕೆಯೋಡೆಯುತ್ತದೆ ಮತ್ತು ಗುಣಮಟ್ಟದ ಇಳುವರಿಯನ್ನು ನೀಡುತ್ತದೆ ಎಂದು ಅವರು ತಿಳಿಸಿದರು. ಇನ್ನು ಮುಂದುವರೆದು ಗೋವಾದಲ್ಲಿ ಸಾವಯವ ಕೃಷಿ ಅಭ್ಯಾಸಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ,ಇದರಿಂದ ರಸಗೊಬ್ಬರಗಳು ಮತ್ತು ರಾಸಾಯನಿಕಗಳನ್ನು ಬಳಸುವುದರಿಂದ ಪರಿಸರದ  ಮೇಲಿನ  ಒತ್ತಡ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.