ಚೆನ್ನೈ: ಚೆನ್ನೈನಲ್ಲಿ ನೀರಿಗೆ ಆಹಾಕಾರ ಎದುರಾಗಿರುವ ಹಿನ್ನಲೆಯಲ್ಲಿ ಡಿಎಂಕೆ ಪಕ್ಷ ಸೋಮವಾರ ಚೆನ್ನೈ ಸೇರಿದಂತೆ ರಾಜ್ಯದ ಹಲವೆಡೆ ತಮಿಳುನಾಡು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.


COMMERCIAL BREAK
SCROLL TO CONTINUE READING

ಚೆಪಾಕ್‌ನಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಎಐಎಡಿಎಂಕೆ ಸರ್ಕಾರವು ರಾಜ್ಯದಲ್ಲಿ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ವಿಫಲವಾಗಿದೆ. ನಗರದ ಸ್ಥಳೀಯರು ಇದರಿಂದ ತೀವ್ರವಾಗಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ರಾಜ್ಯದಲ್ಲಿ ತಲೆದೋರಿರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೇಕಾದ ಎಲ್ಲಾ ಪ್ರಯತ್ನವನ್ನು ಮಾಡುತ್ತಿರುವುದಾಗಿ ಹೇಳಿರುವ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ನೇತೃತ್ವ ಸರ್ಕಾರದ ವಿರುದ್ಧ ಡಿಎಂಕೆ ಪ್ರತಿಭಟನೆ ನಡೆಸುತ್ತಿದೆ. 


ಕಳೆದ ವಾರ, ಪಳನಿಸ್ವಾಮಿ ತಮ್ಮ ಸರ್ಕಾರವು ನೀರಿನ ಕೊರತೆಯನ್ನು ನೀಗಿಸಲು ವೆಲ್ಲೂರು ಜಿಲ್ಲೆಯ ಜೊಲಾರ್‌ಪೆಟ್‌ನಿಂದ ರೈಲು  ಮೂಲಕ ದಿನಕ್ಕೆ 10 ಮಿಲಿಯನ್ ಲೀಟರ್ (ಎಂಎಲ್‌ಡಿ) ನೀರನ್ನು ತರಲಿದೆ ಎಂದು ಹೇಳಿದರು. 


ಏತನ್ಮಧ್ಯೆ, ಕೇರಳ ತನ್ನ ನೆರೆಯ ರಾಜ್ಯಕ್ಕೆ ಸಹಾಯಹಸ್ತ ಚಾಚಿದ್ದು, ನೀರು ಸರಬರಾಜು ಮಾಡಲು ಮುಂದಾಗಿದೆ, ಈ ಕ್ರಮವನ್ನು ತಮಿಳುನಾಡು ಸ್ವಾಗತಿಸಿದೆ. ಮುಲ್ಲಾಪೆರಿಯಾರ್ ಅಣೆಕಟ್ಟಿನಲ್ಲಿ ಗರಿಷ್ಠ ಮಟ್ಟದಲ್ಲಿ ನೀರನ್ನು ಸಂಗ್ರಹಿಸುವಂತೆ ಪಳನಿಸ್ವಾಮಿ ಕೇರಳ ಸರ್ಕಾರಕ್ಕೆ ಮನವಿ ಮಾಡಿದ್ದರು.


ತಮಿಳುನಾಡಿನಲ್ಲಿ, ವಿಶೇಷವಾಗಿ ಚೆನ್ನೈನಲ್ಲಿ ನೀರಿನ ಸಮಸ್ಯೆ ಬಹಳ ಹೆಚ್ಚಾಗಿದೆ. ಹಲವಾರು ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ತಿಳಿಸಿವೆ.