ಎರಡನೇ ಮಹಡಿಯಿಂದ ಜಾರಿ ರಿಕ್ಷಾ ಸೀಟ್ ಮೇಲೆ ಬಿದ್ದ ಮಗು! ಮುಂದೆ...
ಎರಡನೇ ಮಹಡಿಯಿಂದ ಕೆಳಗೆ ಬಿದ್ದ ಮಗುವೊಂದು ಅದೃಷ್ಟವಶಾತ್ ರಸ್ತೆಯಲ್ಲಿ ಚಲಿಸುತ್ತಿದ್ದ ರಿಕ್ಷಾ ಸೀಟಿನ ಮೇಲೆ ಬಿದ್ದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಭೋಪಾಲ್: ಅಪಾರ್ಟ್‌ಮೆಂಟ್ ಒಂದರ ಎರಡನೇ ಮಹಡಿಯಿಂದ ಕೆಳಗೆ ಬಿದ್ದ ಮಗುವೊಂದು ಅದೃಷ್ಟವಶಾತ್ ರಸ್ತೆಯಲ್ಲಿ ಚಲಿಸುತ್ತಿದ್ದ ರಿಕ್ಷಾ ಸೀಟಿನ ಮೇಲೆ ಬಿದ್ದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಧ್ಯಪ್ರದೇಶದ ಟಿಕಮ್‌ಗರ್ ನಲ್ಲಿ ಇತ್ತೀಚಿಗೆ ನಡೆದಿದೆ.
ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಘಟನೆ ಬಗ್ಗೆ ಎಎನ್ಐ ಜೊತೆ ಮಾತನಾಡಿರುವ ಮಗುವಿನ ತಂದೆ ಆಶಿಶ್ ಜೈನ್, ಎರಡನೇ ಮಹಡಿಯಲ್ಲಿದ್ದ ಫ್ಲಾಟ್ ನಲ್ಲಿ ಇತರರೊಂದಿಗೆ ಆಟವಾಡುತ್ತಿದ್ದ ಮಗು ಆಯತಪ್ಪಿ ಕೆಳಗೆ ಬಿತ್ತು. ಅದೇ ಸಮಯಕ್ಕೆ ರಸ್ತೆಯಲ್ಲಿ ರಿಕ್ಷಾ ಹಾದುಹೋಗುತ್ತಿತ್ತು. ಮಗು ಆ ರಿಕ್ಷಾ ಸೈಟಿನ ಮೇಲೆ ಬಿದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿದೆ" ಎಂದು ತಿಳಿಸಿದ್ದಾರೆ.
ಮಗು ಮೇಲಿನಿಂದ ರಿಕ್ಷಾ ಸೀಟಿನ ಮೇಲೆ ಬಿದ್ದಿದ್ದು, ಕೂಡಲೇ ಅಲ್ಲಿದ್ದವರು ಅದನ್ನು ಎತ್ತಿಕೊಂಡು ಕರೆದೊಯ್ದಿರುವುದುದನ್ನು ವೀಡಿಯೋದಲ್ಲಿ ಕಾಣಬಹುದು.