ಹಿಸಾರ್: ಹರಿಯಾಣದ ಹಿಸಾರ್ ಜಿಲ್ಲೆಯ ಬರೋಬ್ಬರಿ 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ 18 ತಿಂಗಳ ಗಂಡು ಮಗುವನ್ನು ಸತತ ಕಾರ್ಯಾಚರಣೆ ಬಳಿಕ ಸುರಕ್ಷಿತವಾಗಿ ಹೊರತೆಗೆಯಲಾಗಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಮಾಹಿತಿ ನೀಡಿರುವ ಹಿಸಾರ್ ಉಪ ಆಯುಕ್ತ ಅಶೋಕ್ ಕುಮಾರ್ ಮೀನಾ, ಹಿಸಾರ್ ನ ಬಾಲ್ ಸಮಂದ್ ಗ್ರಾಮದ ಸಮೀಪದಲ್ಲಿ ಗುರುವಾರ 60 ಅಡಿ ಆಳದ ಬೋರ್ ವೆಲ್ ಗೆ ಬಿದ್ದಿದ ಮಗುವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಗಳು ಹಾಗೂ ಸ್ಥಳೀಯ ಅಧಿಕಾರಿಗಳು ನಿರಂತರ  ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಹೊರತೆಗೆದಿದ್ದಾರೆ ಎಂದು ತಿಳಿಸಿದ್ದಾರೆ.



ಬುಧವಾರ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಒಂದೂವರೆ ವರ್ಷದ ನದೀಮ್ ಖಾನ್ ಎಂಬ ಮಗು ಕೊಳವೆ ಬಾವಿಗೆ ಬಿದ್ದಿತ್ತು. ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ರಕ್ಷಣಾ ತಂಡ ಆಗಮಿಸಿ ಬೋರ್ ವೆಲ್ ಒಳಗೆ ಆಕ್ಸಿಜನ್ ಇಳಿಸಿ, ಮಗುವಿಗೆ ಬಿಸ್ಕೆಟ್ ಹಾಗೂ ಹಣ್ಣಿನ ರಸವನ್ನೂ ನೀಡಲಾಗಿತ್ತು. ಬಳಿಕ ಸತತ ಒಂದು ದಿನದ ಕಾರ್ಯಾಚರಣೆ ಬಳಿಕ ಮಗುವನ್ನು ಹೊರತೆಗೆಯಲಾಗಿದೆ ಎಂದು ಮೀನಾ ವಿವರಿಸಿದ್ದಾರೆ.


ಇದೇ ಸಂದರ್ಭದಲ್ಲಿ ಅನುಮತಿ ಪಡೆಯದೇ ಕೊಳವೆ ಬಾವಿಯನ್ನು ಕೊರೆದದ್ದಲ್ಲದೆ, ಅದನ್ನು ಮುಚ್ಚದೇ ಹಾಗೆಯೇ ಉಳಿಸಿದ ಸಂಬಂಧಿತ ವ್ಯಕ್ತಿ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ಸಹ ಮೀನಾ ಹೇಳಿದ್ದಾರೆ.