ಘೋರಬಂಧ: ಈಗಾಗಲೇ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಜನರ ನಡುವೆಯೇ ಇಲ್ಲಿನ ಸರ್ಕಾರಿ ಶಾಲೆಯೊಂದರಲ್ಲಿ ಮೇಲ್ಚಾವಣಿ ಮಳೆ ನೀರಿನಿಂದ ಸೋರುತ್ತಿದ್ದು, ವಿದ್ಯಾರ್ಥಿಗಳು ಛತ್ರಿ ಹಿಡಿದೇ ಪಾಠ ಕೇಳಬೇಕಾದ ಪರಿಸ್ಥಿತಿ ಎದುರಾಗಿದೆ. 


COMMERCIAL BREAK
SCROLL TO CONTINUE READING

ಜಾರ್ಖಂಡ್ ರಾಜ್ಯದ ಘೋರಬಂಧ ಜಿಲ್ಲೆಯ ಮುರೆಥಾಕುರಾ ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಮಳೆ, ಬಿಸಿಲೆನ್ನದೆ ವಿದ್ಯಾರ್ಥಿಗಳು ಈ ಕಟ್ಟಡದಲ್ಲಿಯೇ ಪಾಠ ಪ್ರವಚನ ಕೇಳುವಂತಾಗಿದೆ.


ಇತ್ತೀಚೆಗೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಶಾಲಾ ಕಟ್ಟಡದ ಮೇಲ್ಚಾವಣಿಯೂ ಸೋರುತ್ತಿದ್ದು, ಮಕ್ಕಳು ಬೇರೆ ದಾರಿಯಿಲ್ಲದೆ ಛತ್ರಿ ಹಿಡಿದುಕೊಂಡು ಕುಳಿತು ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಲೆಯ ಶಿಕ್ಷಕ ರತಿಕಾಂತ್ ಪ್ರಧಾನ್, "ಯಾವುದೇ ಅಹಿತಕರ ಘಟನೆ ನಡೆಯದಂತೆ ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಶಾಲಾ ಕಟ್ಟಡಕ್ಕೆ ನೀಡಲಾಗಿದ್ದ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಈ ಶಾಲೆಯಲ್ಲಿ ಕೇವಲ 7ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದ್ದು 170 ಮಕ್ಕಳಿದ್ದಾರೆ. ಇಲ್ಲಿನ ಮೂರು ಕೊಠಡಿಗಳನ್ನು ಹೊರತುಪಡಿಸಿ ಉಳಿದ ಬಹುತೇಕ ಕೊಠಡಿಗಳು ದುಸ್ಥಿತಿಯಲ್ಲಿವೆ. ಸರ್ಕಾರ್ ಈ ಬಗ್ಗೆ ಗಮನಹರಿಸಿ ಕೂಡಲೇ ಕ್ರಮ ಕೈಗೊಳ್ಳಬೇಕಿದೆ" ಎಂದು ಒತ್ತಾಯಿಸಿದ್ದಾರೆ.


"ಮಳೆಯಿಂದಾಗಿ ನಮಗೆ ತರಗತಿಯಲ್ಲಿ ಕುಳಿತುಕೊಳ್ಳಲು ಸಮಸ್ಯೆಯಾಗಿದೆ. ಪುಸ್ತಕಗಳು ನೀರಿನಿಂದಾಗಿ ಹಾಳಾಗುತ್ತಿವೆ. ನಿಜಕ್ಕೂ ಇಂಥಹ ಪರಿಸ್ಥಿತಿಯಲ್ಲಿ ಪಾಠ ಕೇಳುವುದು ಕಷ್ಟವಾಗುತ್ತಿದೆ. ಮಳೆಯಿಂದ ಪುಸ್ತಕಗಳು ಒದ್ದೆಯಾಗುವುದನ್ನು ತಪ್ಪಿಸಲು ಮನೆಯಿಂದಲೇ ಛತ್ರಿಗಳನ್ನು ತರುತ್ತಿದ್ದೇವೆ" ಎಂದು ವಿದ್ಯಾರ್ಥಿನಿ ಕಲ್ಪನಾ ಅಳಲು ತೋಡಿಕೊಂಡಿದ್ದಾರೆ.


ಇನ್ನಾದರೂ ಜಾರ್ಖಂಡ್ ಸರ್ಕಾರ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಶಾಲಾ ಕಟ್ಟಡದ ದುರಸ್ತಿ ಬಗ್ಗೆ ಗಮನಹರಿಸುವರೇ ಎಂದು ಕಾದು ನೋಡಬೇಕಿದೆ.