ನವದೆಹಲಿ: ಗಲ್ವಾನ್ ಕಣಿವೆಯಲ್ಲಿ ತನ್ನ ಆಕ್ರಮಣಶೀಲ ಹಾಗೂ ಮೊಂಡು ಪ್ರವೃತ್ತಿಯನ್ನು ಮೆರೆಯುವ ಮೂಲಕ ಭಾರತದ ಭೂಮಿಯನ್ನು ಕಬಳಿಸಲು ಕುತಂತ್ರ ನಡೆಸಿದ್ದ ಡ್ರ್ಯಾಗನ್, ಭಾರತ ನೀಡಿರುವ ತಕ್ಕ ಉತ್ತರ ಮತ್ತು ಅಂತಾರಾಷ್ಟ್ರೀಯ ಒತ್ತಡ ಮುಂದೆ ಕೊನೆಗೂ ಮಂಡಿಯೂರಿದೆ ಎನ್ನಲಾಗಿದೆ. 'ದಿ ಹಿಂದೂ' ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಚೀನಾ ಸೈನಿಕರು ಜೂನ್ 15ರಂದು ಪೂರ್ವ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ಸ್ಥಳದಿಂದ ಸುಮಾರು 1.5 ರಿಂದ 2 ಕಿ.ಮೀ ಹಿಂದಕ್ಕೆ ಸರೆದಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಜೂನ್ 15 ರಂದು ನಡೆದ ಘಟನೆಯ ನಂತರ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ LAC ಬಳಿ ತನ್ನ ಸೈನಿಕ ಜಮಾವಣೆಯನ್ನು ಹೆಚ್ಚಿಸಿತ್ತು. ಇದಕ್ಕೆ ತಕ್ಕ ಉತ್ತರ ನೀಡಿದ್ದ ಭಾರತ ಕೂಡ ಆ ಭಾಗದಲ್ಲಿ  ಚೀನಾದ ಅನುಪಾತಕ್ಕೆ ತಕ್ಕಂತೆ ತನ್ನ ಸೈನಿಕರನ್ನು ಕೂಡ ಹೆಚ್ಚಿಸಿ, ಬಂಕರ್ ಹಾಗೂ ತಾತ್ಕಾಲಿಕ ಕ್ಯಾಂಪ್ ಸಿದ್ಧಪಡಿಸಿತ್ತು. ಉಭಯ ದೇಶಗಳ ಸೈನಿಕರು ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ನಿಂತಿದ್ದರು.


ಜೂನ್ 30 ರಂದು ನಡೆದ ಉಭಯ ದೇಶಗಳ ಕಮಾಂಡರ್ ಮಟ್ಟದ ಮಾತುಕತೆಯ ವೇಳೆ ಮೂಡಿದ ಒಮ್ಮತದ ಹಿನ್ನೆಲೆ, ಚೀನಾ ಸೈನಿಕರು ಹಿಂದಕ್ಕೆ ಸರೆದಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಭಾನುವಾರ ಸಮೀಕ್ಷೆ ನಡೆಸಲಾಗಿದೆ. ಬಳಿಕ ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, "ಚೀನಾ ತನ್ನ ಸೇನೆಯನ್ನು ಹಿಂಸಾತ್ಮಕ ಘರ್ಷಣೆ ಸಂಭವಿಸಿದ ಸ್ಥಾನದಿಂದ ಸುಮಾರು 1.5 ರಿಂದ 2 ಕಿ.ಮೀ ಹಿಂದಕ್ಕೆ ಸ್ಥಳಾಂತರಿಸಿದೆ. ತಮ್ಮ ತಮ್ಮ ತಾತ್ಕಾಲಿಕ ಕ್ಯಾಂಪ್ ಗಳನ್ನು ತೆಗೆದುಹಾಕಲು ಉಭಯ ದೇಶಗಳು ಕೂಡ ಒಪ್ಪಿಕೊಂಡಿವೆ" ಎಂದಿದ್ದಾರೆ. ಅಷ್ಟೇ ಅಲ್ಲ ಈ ಬದಲಾವಣೆಯ ತನಿಖೆ ನಡೆಸಲು ಫಿಸಿಕಲ್ ವೆರಿಫಿಕೇಶನ್ ಕೂಡ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.


ಕಳೆದ ಸುಮಾರು ಎರಡು ತಿಂಗಳಿನಿಂದ ಲಡಾಖ್‌ನ ಎಲ್‌ಎಸಿ ಬಳಿ ಉಭಯ ದೇಶಗಳ ಸೇನೆಗಳ ನಡುವೆ ಬಿಕ್ಕಟ್ಟಿನ ಸ್ಥಿತಿ ನಿರ್ಮಾಣಗೊಂಡಿತ್ತು.. ಜೂನ್ 6 ರಂದು ಉಭಯ ಸೇನೆಗಳು ಹಿಂದೆ ಸರಿಯಲು ಒಪ್ಪಿಗೆ ನೀಡಿದ್ದರೂ ಕೂಡ, ಚೀನಾ ಅದನ್ನು ಆಚರಣೆಗೆ ತಂದಿರಲಿಲ್ಲ. ಈ ಕಾರಣದಿಂದಾಗಿ, ಜೂನ್ 15 ರಂದು ಉಭಯ ಸೇನೆಗಳ ನಡುವೆ ಹಿಂಸಾತ್ಮಕ ಘರ್ಷಣೆ ಸಂಭವಿಸಿತ್ತು. ಇದಾದ ಬಳಿಕ ಎರಡೂ  ದೇಶಗಳ ನಡುವಿನ ವಿದೇಶಾಂಗ ಸಚಿವರುಗಳು ಮಾತುಕತೆ ನಡೆಸಿದ್ದರು. ಇದರ ಜೊತೆಗೆ ಜೂನ್ 22 ರಂದು ಮಿಲಿಟರಿ ಕಮಾಂಡರ್‌ಗಳು ಸಹ ಮ್ಯಾರಥಾನ್ ಸಭೆ ನಡೆಸಿದ್ದರು.


ಜೂನ್ 15 ರಂದು ನಡೆದಿದ್ದ ಹಿಸಾತ್ಮಕ ಘರ್ಷಣೆಯ ಬಳಿಕ ಭಾರತ ಸುಮಾರು 3488 ಕಿ.ಮೀ ಉದ್ದದ ವಾಸ್ತವಿಕ ಗಡಿ ನಿಯಂತ್ರಣ ರೇಖೆಯುದ್ದಕ್ಕು ತನ್ನ ವಿಶೇಷ ಸೇನಾಪಡೆ ನಿಯೋಜಿಸಿತ್ತು. ಚೀನಾದ ಲಿಬರೇಶನ್ ಆರ್ಮಿ ವತಿಯಿಂದ ಕೈಗೊಳ್ಳಲಾಗುವ ಯಾವುದೇ ಸಂಭಾವ್ಯ ದಾಳಿಯನ್ನು ಹತ್ತಿಕ್ಕಲು ಭಾರತ ಈ ಕ್ರಮ ಕೈಗೊಂಡಿತ್ತು. ಈ ಕುರಿತು ಮಾಹಿತಿ ನೀಡಿದ್ದ ಸರ್ಕಾರದ ಮೂಲಗಳು ಗಡಿಭಾಗದಲ್ಲಿ PLA ಸೈನಿಕರು ಕೈಗೊಳ್ಳುವ ಯಾವುದೇ ಉಗ್ರ ಚಟುವಟಿಕೆಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಭಾರತೀಯ ಸೇನಾ ಜವಾನರಿಗೆ ಮುಕ್ತಹಸ್ತ ನೀಡಲಾಗಿತ್ತು ಎಂದಿದ್ದಾರೆ.