ವಿವಿಐಪಿ ಕ್ಯಾಪ್ಟರ್ ಹಗರಣ: ನ್ಯಾಯಾಂಗ ಬಂಧನಕ್ಕೆ ಕ್ರಿಶ್ಚಿಯನ್ ಮೈಕೆಲ್
ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಹಗರಣದ ರೂವಾರಿಯಾಗಿದ್ದ ಕ್ರಿಶ್ಚಿಯನ್ ಮೈಕೆಲ್ ಅನ್ನು ದುಬೈನಿಂದ ಡಿಸೆಂಬರ್ 4ರಂದು ಭಾರತಕ್ಕೆ ಕರೆತರಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ.
ನವದೆಹಲಿ: 3600 ಕೋಟಿ ರೂ. ಮೊತ್ತದ ವಿವಿಐಪಿ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಅವರನ್ನು ಡಿಸೆಂಬರ್ 28 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ದೆಹಲಿ ನ್ಯಾಯಾಲಯ ಬುಧವಾರ ಆದೇಶಿಸಿದೆ.
ದುಬೈ ನಿಂದ ಗಡಿಪಾರಾಗಿ ಭಾರತಕ್ಕೆ ಬಂದಿರುವ ಕ್ರಿಶ್ಚಿಯನ್ ಮೈಕೆಲ್(57) ಅವರನ್ನು ವಿಚಾರಣೆಗಾಗಿ ಡಿಸೆಂಬರ್ 19ರವರೆಗೆ ಸಿಬಿಐ ಬಂಧನಕ್ಕೆ ಒಪ್ಪಿಸಿದ್ದ ಕೋರ್ಟ್, ಇಂದು ವಿಚಾರಣೆ ನಡೆಸಿ ಡಿಸೆಂಬರ್ 28ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
12 ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್ಪಿ ತ್ಯಾಗಿ ಸೇರಿದಂತೆ 9 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು, ಈ ಒಪ್ಪಂದದಿಂದ ಸರ್ಕಾರದ ಖಜಾನೆಗೆ 2,666 ಕೋಟಿ ರೂ ನಷ್ಟವಾಗಿದೆ ಎಂದು ಆರೋಪಿಸಿದೆ. ಈ ಹಗರಣದ ರೂವಾರಿಯಾಗಿದ್ದ ಕ್ರಿಶ್ಚಿಯನ್ ಮೈಕೆಲ್ ಅನ್ನು ದುಬೈನಿಂದ ಡಿಸೆಂಬರ್ 4ರಂದು ಭಾರತಕ್ಕೆ ಕರೆತರಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ.